
ಸಂಜೆ ವೇಳೆ ಟೀ ಸಮಯ ಏನಾದರೂ ತಿಂಡಿ ತಿನ್ನಬೇಕು ಅನಿಸುವುದು ಸಹಜ. ಮನೆಯಲ್ಲಿಯೇ ಮಾಡಿದ ತಿಂಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ಅಕ್ಕಿ ಹಿಟ್ಟು ಬಳಸಿ ಮಾಡುವ ರುಚಿಕರವಾದ ತಿಂಡಿ ಇದೆ. ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು: 1- ಬಟ್ಟಲು ಅಕ್ಕಿ ಹಿಟ್ಟು, 1- ಗಡ್ಡೆ ಬೆಳ್ಳುಳ್ಳಿ, 4- 5 ಹಸಿಮೆಣಸು, 1- ಈರುಳ್ಳಿ, 1/2- ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ :- ಮಿಕ್ಸಿ ಜಾರಿಗೆ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ತರಿ – ತರಿಯಾಗಿ ಪೇಸ್ಟ್ ಮಾಡಿಕೊಳ್ಳಬೇಕು ತೀರಾ ಸಣ್ಣಗೆ ರುಬ್ಬಿಕೊಳ್ಳುವುದು ಬೇಡ ನಂತರ ಗ್ಯಾಸ್ ಆನ್ ಮಾಡಿ ಅದರ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ½ ಬಟ್ಟಲು ನೀರು ಹಾಕಿಕೊಳ್ಳಬೇಕು. ನೀರು ಚೆನ್ನಾಗಿ ಕುದಿ ಬಂದ ನಂತರ ಅದಕ್ಕೆ ಉಪ್ಪು, ಮಿಕ್ಸಿ ಮಾಡಿಕೊಂಡಿರುವ ಖಾರದ ಪೇಸ್ಟ್ ಅನ್ನು ಹಾಕಿ ಕೈಯಾಡಿಸಬೇಕು ಇದು ಚೆನ್ನಾಗಿ ಕುದಿ ಬಂದ ನಂತರ ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಬೇಕು.
ನಂತರ ಸಣ್ಣ ಉರಿಯಲ್ಲಿ ಇಟ್ಟು ಮಿಕ್ಸ್ ಮಾಡಬೇಕು. ನಂತರ ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಜೀರಿಗೆ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಮಿಶ್ರಣ ಉಗುರು ಬೆಚ್ಚಗೆ ಇರುವಾಗಲೇ ಕೈಗೆ ಎಣ್ಣೆ ಹಾಕಿಕೊಂಡು ಹಿಟ್ಟನ್ನು ಉಂಡೆ ಮಾಡಿಕೊಂಡು ಪೂರಿ ತರ ಲಟ್ಟಿಸಬೇಕು. ಇದನ್ನು ಕಾದ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಅಕ್ಕಿ ಹಿಟ್ಟಿನ ಪೂರಿ ಸವಿಯಲು ಸಿದ್ಧ.