ಮುಸಲ್ಮಾನರೇ ಹೆಚ್ಚಾಗಿರುವ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ನೀರಿನಲ್ಲಿ ಮುಳುಗಿ ಹೋಗುತ್ತಿದೆ. ಜಕಾರ್ತಾ ಜಾವಾ ಸಮುದ್ರದ ಪಾಲಾಗುತ್ತಿದೆ. ಹಾಗಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ದೇಶದ ರಾಜಧಾನಿಯನ್ನು ಜಕಾರ್ತಾದಿಂದ ಬೋರ್ನಿಯೊಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ 2050ರ ಹೊತ್ತಿಗೆ ಇಂಡೋನೇಷ್ಯಾದ ಪ್ರಸ್ತುತ ರಾಜಧಾನಿ ಜಕಾರ್ತಾದ ಮೂರನೇ ಒಂದು ಭಾಗವು ನೀರಿನಲ್ಲಿ ಮುಳುಗುತ್ತದೆ.
ಹೆಚ್ಚುತ್ತಿರುವ ಜನದಟ್ಟಣೆ, ಮಾಲಿನ್ಯ, ಭೂಕಂಪದ ಸೂಕ್ಷ್ಮ ಪ್ರದೇಶ, ಬಲವಾದ ಗಾಳಿ ಇವೆಲ್ಲವೂ ಇದಕ್ಕೆ ಕಾರಣ. ಹಾಗಾಗಿ ಅಲ್ಲಿನ ನಿವಾಸಿಗಳಿಗೆ ಕೂಡ ಜಕಾರ್ತಾವನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ. ಜಕಾರ್ತಾ ಮುಳುಗಿ ಹೋಗುವ ಆತಂಕವಿರುವುದರಿಂದ ಇಂಡೋನೇಷ್ಯಾ ಹೊಸ ರಾಜಧಾನಿಯನ್ನು ಸ್ಥಾಪಿಸಲು ನಿರ್ಧರಿಸಿದೆ.
ಇಂಡೋನೇಷ್ಯಾದ ಹೊಸ ರಾಜಧಾನಿ ಬೊರ್ನಿಯೊ 256 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ಈ ನಗರದ ಮೂಲಸೌಕರ್ಯವು ಅತ್ಯಾಧುನಿಕವಾಗಿರಲಿದೆ. ಅಲ್ಲಿ ಎಲ್ಲ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗುವುದು.ಆದರೆ ಹೊಸ ರಾಜಧಾನಿ ನಿರ್ಮಾಣವಾಗುತ್ತಿರುವ ಸ್ಥಳ ಅರಣ್ಯ ಪ್ರದೇಶವಾಗಿರುವುದು ಮೂಲ ಸೌಕರ್ಯಗಳನ್ನು ಕಲ್ಪಿಸುವುದು ದೊಡ್ಡ ಸವಾಲಾಗಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯ ಆದಿವಾಸಿಗಳು ಮತ್ತು ಕಾಡು ಪ್ರಾಣಿಗಳು ವಾಸಿಸುತ್ತವೆ. ಹೊಸ ರಾಜಧಾನಿ ಸ್ಥಾಪನೆಯಾದರೆ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತದೆ. ಇದರಿಂದಾಗಿ ಆದಿವಾಸಿಗಳು ಮತ್ತು ಪ್ರಾಣಿಗಳು ವಲಸೆ ಹೋಗಬೇಕಾಗಬಹುದು.
ಸುಮಾರು 10 ಮಿಲಿಯನ್ ಜನರು ಪ್ರಸ್ತುತ ಮುಳುಗುತ್ತಿರುವ ಜಕಾರ್ತಾ ನಗರದಲ್ಲಿ ವಾಸಿಸುತ್ತಿದ್ದಾರೆ. ಅಂತರ್ಜಲ ವಿಪರೀತವಾಗಿ ಬಿಡುಗಡೆಯಾಗಿರುವುದೇ ನಗರ ಮುಳುಗಡೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮತ್ತೊಂದೆಡೆ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಜಾವಾ ಸಮುದ್ರದ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ.
ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ, ದೇಶದ ಹೊಸ ರಾಜಧಾನಿಯನ್ನು ಕಲ್ಪಿಸಿಕೊಂಡಿದ್ದರು. ಅದು ಈಗ ಸಾಕಾರಗೊಳ್ಳುತ್ತಿದೆ. ಅವರು ಬೋರ್ನಿಯೊದಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಲು ಅನುಮತಿ ನೀಡಿದ್ದಾರೆ. ಹೊಸ ರಾಜಧಾನಿ ಅರಣ್ಯ ನಗರವಾಗಲಿದೆ ಎಂದು ಇಂಡೋನೇಷ್ಯಾ ಸರ್ಕಾರ ಹೇಳುತ್ತದೆ. ಶೇ.65ರಷ್ಟು ಪ್ರದೇಶದಲ್ಲಿ ಅರಣ್ಯ ಇರುತ್ತದೆ. ಮುಂದಿನ ವರ್ಷ ಈ ಹೊಸ ನಗರ ಉದ್ಘಾಟನೆಯಾಗಬಹುದು. ಇದನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಲು 2045 ವರೆಗೆ ಸಮಯ ಬೇಕಾಗಬಹುದು.