
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತುಂತುರು ಮಳೆ, ಮೋಡಕವಿದ ವಾತಾವರಣದಿಂದಾಗಿ ಸಿಲಿಕಾನ್ ಸಿಟಿ ಮಂಜಿನ ಹೊದಿಕೆಯಲ್ಲಿರುವಂತೆ ಭಾಸವಾಗುತ್ತಿದೆ. ಊಟಿ, ಮುನಾರ್ ನಂತ ವಾತಾವರಣ ಬೆಂಗಳೂರಿನಲ್ಲಿ ಸೃಷ್ಟಿಯಾಗಿದೆ. ಈ ನಡುವೆ ಜುಲೈ 24ರ ರಾತ್ರಿ ಆಗಸದಲ್ಲಿ ಕೌತುಕವೊಂದು ಸೃಷ್ಟಿಯಾಗಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಆಗಸದಲ್ಲಿ ಬೆಳಕಿನ ನಡುವೆ ಬಾಗಿಲಿನಂತೆ ಕಾಣುವ ನಿಗೂಢ ದೃಶ್ಯವೊಂದು ಮೂಡಿರುವ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಏನಿದು ಅಚ್ಚರಿ…? ತಡರಾತ್ರಿ ಆಕಾಶದಲ್ಲಿ ಇದ್ದಕ್ಕಿದ್ದಂತೆ ಬಾಗಿಲಿನ ಆಕಾರ ಕಂಡುಬಂದಿದ್ದು ಏನು ಕಾರಣವಿರಬಹುದು ಎಂದು ಬೆಂಗಳೂರಿಗರು ಯೋಚಿಸುತ್ತಿದ್ದಾರೆ.
ಕೆಲವರು ಇದನ್ನು ಸ್ವರ್ಗದ ಬಾಗಿಲು ಎಂದು ಕರೆದಿದ್ದಾರೆ. ಇನ್ನು ಕೆಲವರು ಇದು ಎಸ್ಕೇಪ್ ಆಗುವ ಸಿಕ್ರೇಟ್ ಡೋರ್ ಎಂದು ಹೇಳಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ನಿನ್ನೆ ರಾತ್ರಿ ಆಕಾಶದಲ್ಲಿ ಈ ನಿಗೂಢ ನೆರಳಿನ ಬಾಗಿಲು ಕಂಡುಬಂದಿದ್ದು ಇದು ಏನಿರಬಹುದು? ಕಟ್ಟಡಗಳ ನೆರಳಾ? ಎಂದು ವಸೀಮ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.