ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು, ‘ಮಹಾಮೈತ್ರಿ’ ರಚಿಸಿಕೊಂಡು ಬಿಜೆಪಿ ವಿರುದ್ಧ ಸೆಣಸಲಿವೆ ಎಂಬ ಮಾತುಗಳ ಮಧ್ಯೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಪಟನಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಪರಾಭವಗೊಂಡಿರುವುದರಿಂದ ದೃತಿಗೆಟ್ಟಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಒಂದುಗೂಡುವ ಮೊದಲೇ ಅಂದರೆ ಅವಧಿ ಪೂರ್ವವೇ ಚುನಾವಣೆ ನಡೆಸಲು ಮುಂದಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಗೆ ಸಿದ್ಧವಾಗಲು ಪ್ರತಿಪಕ್ಷಗಳಿಗೆ ಹುಮ್ಮಸ್ಸು ನೀಡಿದ್ದರೆ ಬಿಜೆಪಿ ಪಾಳಯದಲ್ಲಿ ನಿರಾಸೆ ಆವರಿಸಿದೆ. ಹೀಗಾಗಿಯೇ ವಿರೋಧ ಪಕ್ಷಗಳು ಒಗ್ಗೂಡಿ ಲೋಕಸಭಾ ಚುನಾವಣೆ ಎದುರಿಸುತ್ತವೆ ಎಂಬ ಕಾರಣಕ್ಕೆ ಅವಧಿಗಿಂತ ಮುಂಚಿತವಾಗಿ ಲೋಕಸಭಾ ಚುನಾವಣೆ ನಡೆಸಲು ಯೋಜನೆ ರೂಪಿಸಿಕೊಂಡಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.