ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ನಾಯಿ, ಬೆಕ್ಕು ಹೀಗೆ ಒಂದಿಲ್ಲೊಂದು ಪ್ರಾಣಿಗಳನ್ನು ಸಾಕಿಕೊಂಡಿರ್ತಾರೆ. ಪರ ಊರಿಗೆ ಪ್ರಯಾಣ ಮಾಡುವಾಗ, ಪ್ರವಾಸ ಹೋಗುವ ಸಂದರ್ಭದಲ್ಲಿ ಆ ಸಾಕು ಪ್ರಾಣಿಗಳನ್ನು ಕೊಂಡೊಯ್ಯುವುದು ತಲೆನೋವಾಗಿ ಪರಿಣಮಿಸುತ್ತದೆ. ಆದ್ರೆ ಇನ್ನು ಮುಂದೆ ಅಂಥಾ ಸಮಸ್ಯೆಯಿಲ್ಲ. ನೀವು ನಿಮ್ಮ ಮುದ್ದಿನ ಪ್ರಾಣಿಗಳೊಂದಿಗೆ ರೈಲಿನಲ್ಲಿ ಆರಾಮಾಗಿ ಪ್ರಯಾಣಿಸಬಹುದು.
ಸಾಕು ಪ್ರಾಣಿಗಳನ್ನು ಕರೆತಂದಿದ್ದಕ್ಕೆ ಸಹ ಪ್ರಯಾಣಿಕರು ಕೂಡ ಆಕ್ಷೇಪಿಸುವಂತಿಲ್ಲ. ಇದಕ್ಕಾಗಿಯೇ ರೈಲ್ವೆ ಇಲಾಖೆ ಹೊಸ ಸೌಲಭ್ಯವನ್ನು ಒದಗಿಸುತ್ತಿದೆ. ಈಶಾನ್ಯ ರೈಲ್ವೆ ಅಧಿಕಾರಿಗಳು, ಪ್ರಯಾಣಿಕರ ಸಾಕು ನಾಯಿಗಳಿಗೆ ಪ್ರತ್ಯೇಕ ಜಾಗದ ಪ್ರಸ್ತಾವಿತ ವಿನ್ಯಾಸವನ್ನು ಅನುಮೋದಿಸಿದ್ದಾರೆ. ಪ್ರಯಾಣಿಕರ ನಾಯಿಗಳಿಗೆ ಪಂಜರಗಳನ್ನು ಇಡಲು ರೈಲುಗಳ ಪವರ್ ಕಾರ್‌ಗಳನ್ನು ಮರುರೂಪಿಸಲಾಗುವುದು.
ಪ್ರಯಾಣದ ಸಮಯದಲ್ಲಿ ಸಾಕುಪ್ರಾಣಿಗಳು ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿರುತ್ತವೆ. ಆದರೆ ಅವುಗಳ ಮಾಲೀಕರು ಪ್ರಾಣಿಗಳಿಗೆ ಆಹಾರ ಮತ್ತು ಇತರ ವ್ಯವಸ್ಥೆಗಳನ್ನು ಮಾಡಬೇಕು. ಈಗಾಗ್ಲೇ ರೈಲಿನಲ್ಲಿ ನಾಯಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಕಾರ್ಯಾರಂಭವಾಗಿದೆ. ಈ ಮಧ್ಯೆ ಭಾರತೀಯ ರೈಲ್ವೇ ಇಲಾಖೆ, ಕಾಯ್ದಿರಿಸಿದ ಪ್ರಯಾಣಿಕರ ವಿಭಾಗದಿಂದ 46 ಪ್ರತಿಶತ ಹೆಚ್ಚು ಆದಾಯವನ್ನು ಗಳಿಸಿದೆ. ಏಪ್ರಿಲ್ 1 ರಿಂದ ಡಿಸೆಂಬರ್ 2022ರವರೆಗೆ ಕಾಯ್ದಿರಿಸದ ಕೋಟಾಕ್ಕಿಂತ ಶೇ.137ಕ್ಕೂ ಹೆಚ್ಚು ಆದಾಯವನ್ನು ಗಳಿಕೆ ಮಾಡಿರುವ ಬಗ್ಗೆ ವರದಿಯಾಗಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಈ 9 ತಿಂಗಳಲ್ಲಿ ರೈಲ್ವೆ ಆದಾಯದಲ್ಲಿ ಭಾರಿ ಏರಿಕೆಯಾಗಿದೆ. ಏಪ್ರಿಲ್‌ನಿಂದ 2022ರ ಡಿಸೆಂಬರ್‌ವರೆಗೆ ಭಾರತೀಯ ರೈಲ್ವೆ ಇಲಾಖೆ ಅಂದಾಜು 48, 913 ಕೋಟಿ ರೂಪಾಯಿ ಗಳಿಸಿದೆ.