ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಳ ಮಾಡಿದೆ. 25 ಬೇಸಿಸ್ ಪಾಯಿಂಟ್ ಗಳಿಂದ ರೆಪೋ ದರವನ್ನು ಶೇ.6.5ಕ್ಕೆ ಹೆಚ್ಚಿಸಿರುವುದಾಗಿ ಆರ್‌ಬಿಐ ಪ್ರಕಟಿಸಿದೆ. ರೆಪೋ ದರ ಏರಿಕೆಯಿಂದಾಗಿ ಸಾಲದ ಇಎಂಐ ಕೂಡ ಹೆಚ್ಚಾಗಲಿದೆ.
ರೆಪೋ ದರ ಎಂದರೇನು ?
ಹಣದ ಕೊರತೆ ಉಂಟಾದಾಗ, ಇತರ ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಹಣವನ್ನು ಎರವಲು ಪಡೆಯುತ್ತವೆ. ರೆಪೋ ದರವು ಈ ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲ ನೀಡಲು ಆರ್‌ಬಿಐ ವಿಧಿಸುವ ಬಡ್ಡಿದರವೇ ಹೊರತು ಬೇರೇನೂ ಅಲ್ಲ. ಈ ದರವನ್ನು ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ಸಹ ಬಳಸುತ್ತಾರೆ.
ಹಣದುಬ್ಬರ
ಹಣದುಬ್ಬರದ ಸಂದರ್ಭದಲ್ಲಿ ಕೇಂದ್ರ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸಬಹುದು. ಇದು ವಾಣಿಜ್ಯ ಬ್ಯಾಂಕುಗಳ ಸಾಲ ನೀಡುವಿಕೆಯನ್ನು ನಿರುತ್ಸಾಹಗೊಳಿಸುತ್ತದೆ. ಹೀಗಾಗಿ ಆರ್ಥಿಕತೆಯಲ್ಲಿ ಹಣದ ಪೂರೈಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಣದುಬ್ಬರದ ದರವನ್ನು ಕಡಿಮೆ ಮಾಡುತ್ತದೆ. ಹೆಚ್ಚಿದ ದರದಲ್ಲಿ ಸಾಲ ಪಡೆದರೆ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ.
ಹಣದ ಪೂರೈಕೆ
ಹಣದುಬ್ಬರ ಕಡಿಮೆಯಾದಾಗ, ಕೇಂದ್ರ ಬ್ಯಾಂಕ್ ರೆಪೊ ದರವನ್ನು ಕಡಿಮೆ ಮಾಡಬಹುದು. ಇದು ಪ್ರೋತ್ಸಾಹಕವಾಗಿ ಕಾರ್ಯನಿರ್ವಹಿಸುತ್ತದೆ. ಸಾಲ ನೀಡಲು ವಾಣಿಜ್ಯ ಬ್ಯಾಂಕುಗಳನ್ನು ಉತ್ತೇಜಿಸುತ್ತದೆ. ಈ ಹಣವನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಒದಗಿಸುತ್ತವೆ. ಇದು ಹಣದ ಪೂರೈಕೆಯನ್ನು ಹೆಚ್ಚಿಸುತ್ತದೆ.
EMI ನಲ್ಲಿ ಹೆಚ್ಚಳ
ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದಾಗಲೆಲ್ಲಾ ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುವ ಸಾಲದ ಬಡ್ಡಿ ದರವನ್ನು ಸಹ ಹೆಚ್ಚಿಸುತ್ತವೆ. ಇದರ ನೇರ ಪರಿಣಾಮ ಸಾಮಾನ್ಯ ಜನರ ಜೇಬಿನ ಮೇಲೆ ಬೀಳುತ್ತದೆ ಮತ್ತು ಸಾಲದ ಬಡ್ಡಿದರ ಹೆಚ್ಚಾಗುತ್ತದೆ. ಇದರಿಂದ ಇಎಂಐ ಕೂಡ ಹೆಚ್ಚಾಗುತ್ತದೆ.