ಬಿಸಿ ಬಿಸಿ ಅನ್ನಕ್ಕೆ ಸೌತೆಕಾಯಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಂಗಳೂರು ಸೌತೆಕಾಯಿ ಸಾಂಬಾರು ಮಾಡುವ ವಿಧಾನ ಇದೆ ಟ್ರೈ ಮಾಡಿ.
ಮೊದಲಿಗೆ ಒಂದು ಸೌತೆಕಾಯಿಯನ್ನು ಕತ್ತರಿಸಿಕೊಂಡು ಅದರ ಒಳಗಿನರುವ ತಿರುಳನ್ನು ತೆಗೆದು ಹದ ಗಾತ್ರದ ಹೋಳುಗಳನ್ನಾಗಿ ಮಾಡಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಅದಕ್ಕೆ ಚಿಟಿಕೆ ಅರಿಶಿನ, 1 ಚಮಚ ಖಾರದ ಪುಡಿ. ಉಪ್ಪು, ಸ್ವಲ್ಪ ಬೆಲ್ಲ, 1 ಚಮಚದಷ್ಟು ಹುಣಸೆಹಣ್ಣಿನ ರಸ ಹಾಕಿ ಬೇಯಲು ಇಡಿ.
ನಂತರ ಮಸಾಲೆಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ನಂತರ 5 ಕಾಳಿನಷ್ಟು ಮೆಂತ್ಯ ಕಾಳು, 1 ಟೀ ಸ್ಪೂನ್ ಜೀರಿಗೆ, 2 ಚಮಚ ಧನಿಯಾ ಬೀಜ, ½ ಚಮಚ ಉದ್ದಿನಬೇಳೆ, 5 ಬ್ಯಾಡಗಿ ಮೆಣಸು ಹಾಕಿ ಫ್ರೈ ಮಾಡಿ. ಮಿಕ್ಸಿ ಜಾರಿಗೆ ಹುರಿದಿಟ್ಟುಕೊಂಡ ಮಸಾಲೆ ಹಾಕಿ, ½ ಕಪ್ ತೆಂಗಿನಕಾಯಿ ತುರಿ ಸೇರಿಸಿ ರುಬ್ಬಿಕೊಳ್ಳಿ. ಇದನ್ನು ಬೇಯಿಸಿಕೊಂಡ ಸೌತೆಕಾಯಿಗೆ ಹಾಕಿ ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ರುಚಿಯಾದ ಸೌತೆಕಾಯಿ ಹುಳಿ ಸವಿಯಲು ಸಿದ್ಧ.