
ಮಧುಮೇಹ ಅಪಾಯಕಾರಿ ಕಾಯಿಲೆಗಳಲ್ಲೊಂದು. ಸಕ್ಕರೆ ಕಾಯಿಲೆಗೆ ತುತ್ತಾದವರು ಅತ್ಯಂತ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಸ್ವಲ್ಪ ನಿರ್ಲಕ್ಷಿಸಿದರೂ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ನಂತರ ಮೂತ್ರಪಿಂಡ ಮತ್ತು ಹೃದಯದ ಕಾಯಿಲೆಗಳು ಬರಬಹುದು. ಹಾಗಾಗಿ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾದ ಹಣ್ಣಿನ ಬಗ್ಗೆ ತಿಳಿಯೋಣ.
‘ಒಂದು ದಾಳಿಂಬೆ ನೂರು ಕಾಯಿಲೆಗೆ ಮದ್ದು’ ಎಂಬ ಮಾತನ್ನು ನೀವು ಕೇಳಿರಬಹುದು. ಈ ಹಣ್ಣು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ದಾಳಿಂಬೆ ಮಧುಮೇಹಕ್ಕೆ ಮಾತ್ರವಲ್ಲದೆ ಇತರ ಅನೇಕ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ. ದಾಳಿಂಬೆಯಲ್ಲಿ ಪೋಷಕಾಂಶಗಳ ಕೊರತೆ ಇಲ್ಲ. ಇದರಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಕೆ, ಫೈಬರ್, ಒಮೆಗಾ-6 ಕೊಬ್ಬಿನಾಮ್ಲಗಳು, ಎಂಟಿಒಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು, ಫಿನಾಲಿಕ್‌ಗಳು, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸತುವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ.
ದಾಳಿಂಬೆ ಸೇವನೆಯ ಪ್ರಯೋಜನಗಳು
ಮಧುಮೇಹಕ್ಕೆ ಮದ್ದು – ದಾಳಿಂಬೆ ಬೀಜಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ. ಇದು ಮಧುಮೇಹ ರೋಗಿಗಳಿಗೆ ಔಷಧಿಗಿಂತ ಕಡಿಮೆಯಿಲ್ಲ. ದಾಳಿಂಬೆ ಬೀಜಗಳನ್ನು ನೇರವಾಗಿ ತಿಂದರೆ ಉತ್ತಮ ನಾರಿನಂಶ ದೊರೆಯುತ್ತದೆ. ದಾಳಿಂಬೆ ಜ್ಯೂಸ್ ಮಾಡಿ ಕುಡಿದರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಸಾಕಷ್ಟು ಸಹಕಾರಿಯಾಗುತ್ತದೆ.
ರಕ್ತಹೀನತೆ ನೀಗಿಸುತ್ತದೆ – ದೇಹದಲ್ಲಿ ರಕ್ತದ ಕೊರತೆಯಿರುವವರು ಸಾಮಾನ್ಯವಾಗಿ ಆಯಾಸ ಮತ್ತು ದೌರ್ಬಲ್ಯವನ್ನು ಎದುರಿಸುತ್ತಾರೆ. ರಕ್ತಹೀನತೆಯಿದ್ದಾಗ ದಾಳಿಂಬೆಯನ್ನು ಖಂಡಿತವಾಗಿ ಸೇವಿಸಿ. ಇದು ಕಬ್ಬಿಣದ ಕೊರತೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ, ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.
ಗರ್ಭಾವಸ್ಥೆಯಲ್ಲಿ ಸಹಾಯಕ– ಎಂಟಿಒಕ್ಸಿಡೆಂಟ್ ಗುಣಲಕ್ಷಣಗಳು ದಾಳಿಂಬೆಯಲ್ಲಿ ಕಂಡುಬರುತ್ತವೆ. ಇದರ ಮೂಲಕ ಗರ್ಭಾವಸ್ಥೆಯಲ್ಲಿ ಜರಾಯು ರಕ್ಷಿಸಲ್ಪಡುತ್ತದೆ. ಈ ಹಣ್ಣಿನಲ್ಲಿರುವ ಫೋಲೇಟ್ ಮಹಿಳೆಯ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.