
ಬದುಕಿನ ಮಹತ್ವದ ಘಟ್ಟಗಳಲ್ಲಿ ಮದುವೆಯೂ ಒಂದು. ಆ ದಿನ ಮದು ಮಗಳಿಗೆ ತಾನು ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಹೆಬ್ಬಯಕೆ ಇರುವುದು ಸಹಜ. ಅದರೆ ಅದಕ್ಕಾಗಿ ಫೇಶಿಯಲ್, ಕ್ಲೀನ್ ಅಪ್, ವ್ಯಾಕ್ಸಿಂಗ್ ಗಳನ್ನು ಹೇಗೆ, ಯಾವಾಗ ಮಾಡಬೇಕು ಎಂಬುದರ ಬಗ್ಗೆಯೂ ಗಮನ ಕೊಡಬೇಕು.
ತ್ವಚೆಗೆ ನೀವು ಈಗ ಬಳಸುತ್ತಿರುವ ಫೇಸ್ ಮಾಸ್ಕ್ ಅನ್ನೇ ಉಪಯೋಗಿಸಿ. ಈವರೆಗೆ ಯತ್ನಿಸದ, ಹೊಸ ವಿಧಾನವನ್ನು ಅನುಸರಿಸದಿರಿ ಅಥವಾ ಕೆಲವು ಹಂತಗಳನ್ನು ಅದಕ್ಕೆ ಜೋಡಿಸದಿರಿ. ಹೊಸ ವಿಧಾನ ಅನುಸರಿಸಿ ತ್ವಚೆಯಲ್ಲಿ ಅಲರ್ಜಿ ಲಕ್ಷಣಗಳು ಕಂಡು ಬಂದರೆ ಅದನ್ನು ಸರಿಪಡಿಸುವುದು ಮತ್ತಷ್ಟು ಕಷ್ಟದ ಕೆಲಸವಾಗಬಹುದು.
ಬ್ರಾಂಡೆಡ್ ಅಥವಾ ಉತ್ತಮವಾದುದು ಎಂಬ ಕಾರಣಕ್ಕೆ ನೀವು ನಿತ್ಯ ಬಳಸುವ ಲೋಷನ್ ಗಳನ್ನು ಬದಲಾಯಿಸದಿರಿ. ನಿಮ್ಮ ತ್ವಚೆ ಹೊಸ ಉತ್ಪನ್ನಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿದಿರದ ಕಾರಣ ಪ್ರಯೋಗಕ್ಕೆ ಇದು ಸಕಾಲವಲ್ಲ. ಎಷ್ಟೇ ಉತ್ತಮ ಉತ್ಪನ್ನವಾದರೂ ಅದರಿಂದ ದೂರವಿರಿ.
ರಾಸಾಯನಿಕ ಸ್ಕಿನ್ ಕೇರ್ ಪ್ರಯೋಗ ಈ ಸಮಯದಲ್ಲಿ ಬೇಡ. ಅತಿಯಾದ ಪರಿಮಳ ಬೀರುವ ಉತ್ಪನ್ನಗಳನ್ನೂ ಪ್ರಯತ್ನಿಸದಿರಿ. ಇವು ಚರ್ಮಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯೇ ಹೆಚ್ಚು. ಮುಖದಲ್ಲಿ ಮೊಡವೆ ಬಂದರೆ ಅದನ್ನು ಮುಟ್ಟುತ್ತಿರಬೇಡಿ ಹಾಗೂ ಚಿವುಟದಿರಿ. ಸನ್ ಸ್ಕ್ರೀನ್ ಬಳಸಿಯೇ ಹೊರಗಡೆ ಓಡಾಡಿ.