ಬೇಸಿಗೆ ಬಂತಂದ್ರೆ ಮಕ್ಕಳಿಗೆಲ್ಲ ರಜೆ. ಫ್ಯಾಮಿಲಿ ಒಟ್ಟಾಗಿ ಎಲ್ಲಾದ್ರೂ ಪ್ರವಾಸಕ್ಕೆ ಹೋಗೋಣ ಅಂತ ನೀವೇನಾದ್ರೂ ಅಂದುಕೊಳ್ತಾ ಇದ್ರೆ ಇಂಥಾ ಸೆಖೆಯಲ್ಲೂ ತಂಪಾಗಿರುವ ಪ್ರವಾಸಿ ತಾಣಗಳನ್ನು ನಾವ್ ನಿಮಗೆ ಸಜೆಸ್ಟ್ ಮಾಡ್ತೀವಿ. ವಿಪರೀತ ಸೆಖೆಯಿಂದ ಬೇಸತ್ತು ತಂಪಾದ ತಾಣಗಳಲ್ಲಿ ಕಾಲ ಕಳೆಯುವ ಮನಸ್ಸು ನಿಮಗಿದ್ರೆ ಉತ್ತರಾಖಂಡ ಹಾಗೂ ಹಿಮಾಚಲ ಅತ್ಯುತ್ತಮ ಆಯ್ಕೆಗಳು.
ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಸಾಕಷ್ಟು ಟೂರಿಸ್ಟ್ ಪ್ಲೇಸ್ ಗಳಿವೆ. ಅಲ್ಲಿಗೆ ನೀವು ವಿಸಿಟ್ ಮಾಡಬಹುದು. ಜೊತೆಗೆ ಜಮ್ಮು-ಕಾಶ್ಮೀರದ ಸೌಂದರ್ಯವನ್ನು ಕೂಡ ಕಣ್ತುಂಬಿಕೊಳ್ಳಲು ಬೇಸಿಗೆ ಸಕಾಲ.
ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್ ಭಾರತದ ಅತ್ಯಂತ ಅದ್ಭುತವಾದ ಪ್ಯಾರಾಗ್ಲೈಡಿಂಗ್ ತಾಣಗಳಲ್ಲಿ ಒಂದಾಗಿದೆ. ನೀವು ಸಾಹಸವನ್ನು ಇಷ್ಟಪಡುವವರಾಗಿದ್ದರೆ ಖಂಡಿತವಾಗಿಯೂ ಒಮ್ಮೆ ಬಿರ್ ಬಿಲ್ಲಿಂಗ್‌ಗೆ ಭೇಟಿ ನೀಡಿ. ಬೇಸಿಗೆಯಲ್ಲಿ ಪ್ರವಾಸಿಗರು ಮತ್ತು ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಉಳ್ಳ ಪ್ರವಾಸಿಗರ ಸಂಖ್ಯೆ ಇಲ್ಲಿ ಹೆಚ್ಚಾಗಿರುತ್ತದೆ. ಇಲ್ಲಿನ ತಂಪಾದ ಹವಾಮಾನವನ್ನು ಆಸ್ವಾದಿಸುತ್ತ ರಜಾದಿನಗಳನ್ನು ಕಳೆಯುತ್ತಾರೆ.
ಹಿಮಾಚಲ ಪ್ರದೇಶ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಮನಾಲಿಯಿಂದ ಕುಲು ಮತ್ತು ಮಂಡಿಯವರೆಗೆ ಅನೇಕ ಪ್ರವಾಸಿ ತಾಣಗಳಿವೆ. ಹಿಮಾಚಲ ಪ್ರದೇಶ ಚಳಿಗಾಲದಲ್ಲಿ ಹಾಗೂ ಬೇಸಿಗೆಯಲ್ಲಿ ಪ್ರವಾಸಿಗರಿಂದಲೇ ತುಂಬಿರುತ್ತದೆ. ಬೇಸಿಗೆಯಲ್ಲಿ ಇಲ್ಲಿನ ಹವಾಮಾನವು ತುಂಬಾ ಚೆನ್ನಾಗಿರುತ್ತದೆ, ಚಳಿಯ ಅನುಭವ ನಿಮಗಾಗುತ್ತದೆ.
ಧನೌಲ್ಟಿ ಕೂಡ ಒಂದು ಪ್ರಸಿದ್ಧ ಗಿರಿಧಾಮ. ಈ ಸ್ಥಳದ ಸೌಂದರ್ಯವು ನಿಮ್ಮ ಮನಸೂರೆಗೊಳ್ಳುತ್ತದೆ. ಎತ್ತರದ ಪರ್ವತಗಳು, ಪೈನ್ ಮತ್ತು ದೇವದಾರು ಮರಗಳು ಕಣ್ಣಿಗೆ ಹಬ್ಬ ಉಂಟು ಮಾಡುತ್ತವೆ. ಕ್ಯಾಂಪಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಧನೌಲ್ಟಿ ಉತ್ತಮ ಸ್ಥಳವಾಗಿದೆ. ಇಲ್ಲಿ ನೀವು ಸುರ್ಕಂದ ದೇವಿ ದೇವಸ್ಥಾನ, ದಶಾವತಾರ ದೇವಸ್ಥಾನ ಮತ್ತು ದಿಯೋಗರ್ ಕೋಟೆಗೆ ಭೇಟಿ ನೀಡಬಹುದು.
ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಒಂದು ಸುಂದರವಾದ ಗಿರಿಧಾಮ. ಇದನ್ನು ಭೂಮಿಯ ಮೇಲಿನ ಸ್ವರ್ಗ ಎಂದೂ ಕರೆಯುತ್ತಾರೆ. ಮೊಘಲ್ ಚಕ್ರವರ್ತಿ ಜಹಾಂಗೀರ್ ತನ್ನ ರಜಾದಿನಗಳನ್ನು ಕಳೆಯಲು ಗುಲ್ಮಾರ್ಗ್ ಗೆ ಆಗಾಗ್ಗೆ ಬರುತ್ತಿದ್ದನಂತೆ. ಜಹಾಂಗೀರ್ ಇಲ್ಲಿ 21 ಬಗೆಯ ಹೂವುಗಳ ಉದ್ಯಾನವನ್ನು ನೆಟ್ಟಿದ್ದಾನೆ ಎಂಬ ಪ್ರತೀತಿಯಿದೆ.
ನೈನಿತಾಲ್ ಕೂಡ ಅತ್ಯದ್ಭುತ ಪ್ರವಾಸಿ ತಾಣ. ಉತ್ತರಾಖಂಡದ ಸುಂದರ ಗಿರಿಧಾಮ ನೈನಿತಾಲ್ ನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ. ನೈನಿತಾಲ್‌ನ ನೈನಿ ಸರೋವರದಲ್ಲಿ ವಿಹಾರ ಮಾಡಬಹುದು. ದಡದಲ್ಲಿ ಕುಳಿತು ವಿಶ್ರಾಂತಿ ಕೂಡ ಪಡೆಯಬಹುದು. ಇಲ್ಲಿರುವ ನೈನಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ನಿಮ್ಮ ವಾರಾಂತ್ಯದ ಪ್ರವಾಸಕ್ಕಾಗಿ ನೈನಿತಾಲ್ ಹೇಳಿ ಮಾಡಿಸಿದಂತಹ ಜಾಗ.