ಬೆಳಗಿನ ಉಪಹಾರಕ್ಕೆ ದೋಸೆಗಿಂತ ಬೆಸ್ಟ್ ತಿನಿಸು ಇನ್ಯಾವುದೂ ಇಲ್ಲ. ದಿಢೀರ್ ಅಂತ ನೀವು ಮಸಾಲೆ ದೋಸೆ ಸಹ ಮಾಡ್ಬಹುದು. ಆದ್ರೆ ಇದು ಉದ್ದು, ಅಕ್ಕಿ ಹಾಕಿ ಮಾಡುವ ಸಾಂಪ್ರದಾಯಿಕ ಮಸಾಲೆ ದೋಸೆಯಲ್ಲ. ಇನ್ ಸ್ಟಂಟ್ ಬ್ರೆಡ್ ಮಸಾಲೆ ದೋಸೆ.
ಬೇಕಾಗುವ ಸಾಮಗ್ರಿ :
8 ಬ್ರೆಡ್ ಸ್ಲೈಸ್ ಗಳು, ಅರ್ಧ ಕಪ್ ಬಾಂಬೆ ರವಾ, 2 ಚಮಚ ಅಕ್ಕಿ ಹಿಟ್ಟು, ಕಾಲು ಕಪ್ ಮೊಸರು, ಅಗತ್ಯಕ್ಕೆ ತಕ್ಕಷ್ಟು ನೀರು, ಉಪ್ಪು, ಸ್ವಲ್ಪ ಎಣ್ಣೆ, ಆಲೂಗಡ್ಡೆ ಪಲ್ಯ.
ಮಾಡುವ ವಿಧಾನ :
ಬ್ರೆಡ್ ಸ್ಲೈಸ್ ತೆಗೆದುಕೊಂಡು ನಾಲ್ಕೂ ಬದಿಯನ್ನು ಕತ್ತರಿಸಿ ತೆಗೆಯಿರಿ. ಕೈಗಳಿಂದ್ಲೇ ಬ್ರೆಡ್ ಅನ್ನು ಪುಡಿ ಪುಡಿ ಮಾಡಿ. ಅದಕ್ಕೆ ಅರ್ಧ ಕಪ್ ರವಾ, ಅಕ್ಕಿ ಹಿಟ್ಟು, ಮೊಸರು, ಉಪ್ಪು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಮಿಕ್ಸ್ ಮಾಡಿ.
20-30 ನಿಮಿಷ ಹಾಗೇ ಬಿಡಿ. ನಂತರ ಮಿಕ್ಸಿ ಜಾರಿನಲ್ಲಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ದೋಸೆ ಕಾವಲಿಯನ್ನು ಬಿಸಿ ಮಾಡಿ, ಸ್ವಲ್ಪ ನೀರು ಚಿಮುಕಿಸಿ ಟಿಶ್ಯೂ ಪೇಪರ್ ನಿಂದ ಒರೆಸಿ. ನಂತರ ದೋಸೆ ಹಿಟ್ಟನ್ನು ತೆಳ್ಳಗೆ ಹೊಯ್ದು ಅದರ ಮೇಲೆ ಬೆಣ್ಣೆ ಹಾಕಿ. ಮುಚ್ಚಳ ಮುಚ್ಚಿ ಒಂದು ನಿಮಿಷ ಹಾಗೇ ಬಿಡಿ.
ಮಧ್ಯದಲ್ಲಿ ಆಲೂಗಡ್ಡೆ ಪಲ್ಯ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಬೇಯಿಸಿ. ದೋಸೆ ಗರಿಗರಿಯಾದ ಮೇಲೆ ಪೋಲ್ಡ್ ಮಾಡಿ ತೆಗೆಯಿರಿ. ಕಾಯಿ ಚಟ್ನಿ ಜೊತೆ ಬ್ರೆಡ್ ಮಸಾಲೆ ದೋಸೆ ಸವಿಯಲು ಸಿದ್ಧ.