ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯೆ ಸುಮಲತಾ ಅಂಬರೀಶ್ ಯಾವ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ. ಬಿಜೆಪಿ ಅಥವಾ ಕಾಂಗ್ರೆಸ್ ಎರಡು ಪಕ್ಷಗಳು ಅವರ ಮುಂದಿದ್ದು, ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
ಸುಮಲತಾ ಅಂಬರೀಶ್, ತಮ್ಮ ಪುತ್ರ ಅಭಿಷೇಕ್ ಅಂಬರೀಶ್ ಅವರನ್ನು ಸಹ ರಾಜಕೀಯಕ್ಕೆ ತರುವ ಇರಾದೆ ಹೊಂದಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಯಾವುದಾದರೂ ಒಂದು ಕ್ಷೇತ್ರದಿಂದ ಅಭಿಷೇಕ್ ಅವರನ್ನು ಕಣಕ್ಕಿಳಿಸಲು ಬಯಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಳ್ಳುವಂತೆ ಸುಮಲತಾ ಅಂಬರೀಶ್ ಅವರಿಗೂ ಸಹ ಆಪ್ತರು ಸಲಹೆ ನೀಡಿದ್ದು, ಹೀಗಾಗಿ ಅಭಿಷೇಕ್ ಅಂಬರೀಶ್ ಹಾಗೂ ತಮಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಿಜೆಪಿ ನಾಯಕರು ಸುಮಲತಾ ಅಂಬರೀಶ್ ಅವರ ಜೊತೆ ಮಾತುಕತೆ ನಡೆಸಿದ್ದು, ಅಭಿಷೇಕ್ ಅವರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲು ಸಮ್ಮತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸುಮಲತಾ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ. ಹೀಗಾಗಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಬಹುತೇಕ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.