ನಾಳೆಯೇ ಹೋಳಿ ಹಬ್ಬ ಬಂದಿದೆ. ಹೋಳಿ ಹಬ್ಬದಲ್ಲಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ಸ್ನೇಹಿತರು, ಸಂಬಂಧಿಕರು ಹೀಗೆ ಎಲ್ಲರು ಬಣ್ಣ ಎರಚುವವರೆ. ಹಬ್ಬದ ಸಂದರ್ಭದಲ್ಲಿ ತಲೆ, ಮೈ ಎಲ್ಲವೂ ಬಣ್ಣದೋಕುಳಿಯಲ್ಲಿಯೇ ತುಂಬಿ ಹೋಗಿರುತ್ತದೆ.
ಇಂತಹ ಸಂದರ್ಭದಲ್ಲಿ ಚರ್ಮದ, ಹಾಗೂ ಕೂದಲಿನ ರಕ್ಷಣೆ ಹೇಗೆ ಮಾಡಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
ತಲೆಕೂದಲನ್ನು ಶಾಂಪೂವಿನಿಂದ ತೊಳೆಯುವ ಮೊದಲು ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ನಂತರ ನೆನೆಸಿಟ್ಟುಕೊಂಡ ಮೆಂತೆಯನ್ನು ಮೊಸರಿನೊಂದಿಗೆ ರುಬ್ಬಿಕೊಂಡು ಇದರ ಹೇರ್ ಪ್ಯಾಕ್ ಹಾಕಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಒಳ್ಳೆಯ ಶಾಂಪೂವಿನಿಂದ ತಲೆ ತೊಳೆದುಕೊಳ್ಳಿರಿ. ಡೀಪ್ ಕಂಡೀಷನಿಂಗ್ ಗಾಗಿ ಜೇನುತುಪ್ಪ ಹಾಗೂ ಆಲಿವ್ ಆಯಿಲ್ ನ ಮಿಶ್ರಣವನ್ನು ಹಚ್ಚಿಕೊಳ್ಳಬಹುದು.
ಇನ್ನು ಒಂದು ಕಪ್ ಮೊಸರಿಗೆ ಒಂದು ಟೇಬಲ್ ಸ್ಪೂನ್ ಲಿಂಬೆ ಹಣ್ಣಿನ ರಸ ಸೇರಿಸಿ ಇದನ್ನು ತಲೆಗೆ ಹಚ್ಚಿಕೊಳ್ಳಿ ನಂತರ ಯಾವುದಾದರೂ ಒಳ್ಳೆಯ ಶಾಂಪೂ ಬಳಸಿ ತಣ್ಣೀರಿನಿಂದ ತಲೆ ಸ್ನಾನ ಮಾಡಿ. ಇದರಿಂದ ಕೂದಲಿಗೆ ಅಂಟಿದ ಬಣ್ಣ ಹೋಗುತ್ತದೆ.
ಮುಖಕ್ಕೆ ಬಣ್ಣ ತಾಕಿದ್ದರೆ ಮೊದಲಿಗೆ ಕಡಲೇ ಹಿಟ್ಟಿಗೆ ಸ್ವಲ್ಪ ಹಾಲು ಸೇರಿಸಿ ಈ ಮಿಶ್ರಣವನ್ನು ಹಚ್ಚಿಕೊಂಡು ನಿಧಾನಕ್ಕೆ ಮಸಾಜ್ ಮಾಡಿ ಮುಖ ತೊಳೆಯಿರಿ. ನಂತರ ಮುಲ್ತಾನಿ ಮಟ್ಟಿ, ರೋಸ್ ವಾಟರ್ ಸೇರಿಸಿ ಪೇಸ್ ಪ್ಯಾಕ್ ಹಚ್ಚಿಕೊಳ್ಳಿ. ಮುಲ್ತಾನಿ ಮಿಟ್ಟಿ ಪ್ಯಾಕ್ ಅನ್ನು ಇಡೀ ದೇಹಕ್ಕೆ ಹಚ್ಚಿಕೊಳ್ಳಬಹುದು.
ಹಾಗೇ ತೆಂಗಿನ ಎಣ್ಣೆಯಿಂದ ಮೈ, ಮುಖಕ್ಕೆಲ್ಲಾ ಮಸಾಜ್ ಮಾಡಿಕೊಂಡು ಸೋಪ್ ಬದಲು ಕಡಲೇಹಿಟ್ಟಿನಿಂದ ತೊಳೆದರೆ ಬಣ್ಣ ಹೋಗುತ್ತದೆ.