ಬೆಳಗ್ಗೆ ತಿಂಡಿಗೆ ಪಟಪಟ ಅಂತ ರೆಡಿಯಾಗುತ್ತೆ ಅವಲಕ್ಕಿಯ ಪದಾರ್ಥಗಳು. ಯಾಕೆಂದರೆ ಮಾಡಲು ತುಂಬಾ ಸುಲಭ. ಅವಲಕ್ಕಿಯ ಹಲವು ವೆರೈಟಿ ವೆರೈಟಿ ತಿಂಡಿಗಳನ್ನು ಸವಿದಿದ್ದೀರಾ. ಹಾಗೇ ಅವಲಕ್ಕಿ ಪೊಂಗಲ್ ರುಚಿ ಹೇಗಿದೆ ಅಂತ ನೋಡಬೇಕು ಅಂದ್ರೆ ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು :
ಗಟ್ಟಿ ಅವಲಕ್ಕಿ – 1 ಕಪ್
ಹುರಿದಿರುವ ಹೆಸರುಬೇಳೆ – 1 ಕಪ್
ಕಾಳುಮೆಣಸಿನ ಪುಡಿ – 1/2 ಚಮಚ
ಜೀರಿಗೆ – 1 ಚಮಚ
ಕತ್ತರಿಸಿದ ಹಸಿಮೆಣಸಿನ ಕಾಯಿ – 3
ತೆಂಗಿನಕಾಯಿ ತುರಿ – 1/4 ಕಪ್
ಕತ್ತರಿಸಿದ ಕರಿಬೇವು – 2 ಚಮಚ
ಕತ್ತರಿಸಿದ ಕೊತ್ತಂಬರಿ – 2 ಚಮಚ
ನಿಂಬೆ ರಸ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ – 1 ಚಮಚ
ಕಡಲೆ ಬೇಳೆ – 2 ಚಮಚ
ಉದ್ದಿನಬೇಳೆ – 1 ಚಮಚ
ತುಪ್ಪ – 2 ಚಮಚ
ತುಪ್ಪದಲ್ಲಿ ಹುರಿದ ಗೋಡಂಬಿ 8-10
ಮಾಡುವ ವಿಧಾನ :
ಗಟ್ಟಿ ಅವಲಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆಸಬೇಕು. ಹೆಸರುಬೇಳೆಯನ್ನು ಮೃದುವಾಗಿ ಬೇಯಿಸಿ ನೆನಸಿದ ಅವಲಕ್ಕಿಯನ್ನು ಬೆರೆಸಬೇಕು. ಬಾಣಲೆಯಲ್ಲಿ ತುಪ್ಪ ಕಾಯಿಸಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು.
ಒಗ್ಗರಣೆಗೆ ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳು, ಕಾಳುಮೆಣಸಿನ ಪುಡಿ, ಉಪ್ಪು ಹಾಕಿ ಬಾಡಿಸಿಕೊಳ್ಳಬೇಕು. ಒಗ್ಗರಣೆಯ ಮಿಶ್ರಣಕ್ಕೆ ಬೇಯಿಸಿದ ಹೆಸರುಬೇಳೆ, ಅವಲಕ್ಕಿ ಮಿಶ್ರಣ, ಗೋಡಂಬಿ, ನಿಂಬೆರಸ ಹಾಕಿ ಮಗುಚಿ ಒಲೆಯಿಂದ ಕೆಳಗಿಳಿಸಬೇಕು. ಕೊನೆಯಲ್ಲಿ ತೆಂಗಿನ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅವಲಕ್ಕಿ ಪೊಂಗಲ್ ರೆಡಿ ಟು ಈಟ್.