ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ 40 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ಇದರಿಂದಾಗಿ 2,000ಕ್ಕೂ ಹೆಚ್ಚು ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಮಳೆಯಿಂದ ತಮಗೆ ಆದ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಮಖಂಡಿ ತಾಲೂಕಿನ ಚಿಕ್ಕಲಗಿ ಗ್ರಾಮದ 6 ಮಂದಿ ರೈತರು ಮೊಬೈಲ್ ಟವರ್ ಏರಿ ಕುಳಿತಿದ್ದು, ಸ್ಥಳಕ್ಕೆ ಅಧಿಕಾರಿಗಳು ಬರುವವರೆಗೂ ಕೆಳಗಿಳಿಯುವುದಿಲ್ಲವೆಂದು ಪಟ್ಟು ಹಿಡಿದಿದ್ದರು.
ಮಲ್ಲಪ್ಪ ಬಿರಾದಾರ, ಸಿದ್ದು ಶಿಂಧೆ, ಯಲ್ಲಪ್ಪ ಬೆಳ್ಳುಬ್ಬಿ, ಮುನಿಕ ಗುರಚಿ, ಜ್ಞಾನದೇವ ಮಳಿಕ ಹಾಗೂ ಚಿರಾವ ಮೋಹಿತೆ ಟವರ್ ಏರಿದವರಾಗಿದ್ದು, ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಬಳಿಕ ಆಗಮಿಸಿದ ತಹಶೀಲ್ದಾರ್ ಸದಾಶಿವ ಮುಕ್ಕೋಜಿ, ಬೆಳೆ ಹಾನಿ ಕುರಿತು ಸರ್ವೇ ಮಾಡಿಸಿದ ಬಳಿಕ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಅವರುಗಳು ಕೆಳಗಿಳಿದಿದ್ದಾರೆ.