ಮಹಾರಾಷ್ಟ್ರದ ಧಾರಾವಿಯಲ್ಲಿ ಬರ್ಬರ ಕೃತ್ಯವೊಂದು ನಡೆದಿದೆ. ದುಷ್ಕರ್ಮಿಗಳು ಪತ್ನಿಯ ಎದುರಲ್ಲೇ ಪತಿಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ರಾತ್ರಿ ಪತಿ-ಪತ್ನಿ ಇಬ್ಬರೂ ಒಟ್ಟಿಗೆ ತೆರಳುತ್ತಿದ್ದರು. ಜನನಿಬಿಡ ಪ್ರದೇಶದಲ್ಲೇ ಆತನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ಗಾಯಗೊಂಡಿದ್ದ ಆತನನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಆದ್ರೆ ಅಷ್ಟರಲ್ಲಾಗ್ಲೇ ಆತ ಮೃತಪಟ್ಟಿದ್ದ. ಗಂಡನನ್ನು ರಕ್ಷಿಸಲು ಪ್ರಯತ್ನಿಸಿದ ಹೆಂಡತಿಗೂ ಗಾಯಗಳಾಗಿವೆ.
ಮೃತನನ್ನು ಜಾಹಿದ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಈತ ವಾಚ್‌ಮನ್ ಆಗಿದ್ದ. ಯಾವುದೋ ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಜಾಹಿದ್‌ನನ್ನು ಹತ್ಯೆ ಮಾಡಿದ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ. ಧಾರಾವಿಯ 90 ಫೀಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇದು ಜನನಿಬಿಡ ಪ್ರದೇಶ ಜೊತೆಗೆ ಪೊಲೀಸ್ ಠಾಣೆಗೆ ಹತ್ತಿರದಲ್ಲಿದೆ. ಆದರೂ ದುಷ್ಕರ್ಮಿಗಳು ಇಂಥಾ ಕೃತ್ಯ ನಡೆಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.