
ವಸತಿ ಸಚಿವ ವಿ. ಸೋಮಣ್ಣ ಕಳೆದ ಕೆಲವು ದಿನಗಳಿಂದ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಇರುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಹೊಂದಿರುವ ವಿ. ಸೋಮಣ್ಣ ಹೀಗಾಗಿಯೇ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಶುಕ್ರವಾರದಂದು ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಸೋಮಣ್ಣ ಅವರನ್ನು ಹೊರಗಿಡಲಾಗಿದೆ. ಇದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದ್ದು, ಇದರ ಮಧ್ಯೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸೋಮಣ್ಣ, ನಾನು ಸದಾ ಹರಿಯುವ ನೀರು ಎನ್ನುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.
ಕ್ಷೇತ್ರದ ಜನತೆ ನನಗೆ ಮನೆ ಮಗನಂತೆ ನೋಡಿಕೊಂಡಿದ್ದಾರೆ. ನಾನು ಸದಾ ಹರಿಯುವ ನೀರು ಎಂದು ಹೇಳಿದ ಅವರು, ಯಾರ ಬಗ್ಗೆಯೂ ನಾನು ಒಂದಕ್ಷರವನ್ನು ಮಾತನಾಡುವುದಿಲ್ಲ. ಅದರ ಅಗತ್ಯವು ನನಗಿಲ್ಲ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಮುಂದಿನ ದಿನಗಳಲ್ಲಿ ತಮ್ಮ ನಡೆ ಏನು ಎಂಬುದರ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.