ಕೋವಿಡ್ ಸೋಂಕು ಕಳೆದೆರಡು ವರ್ಷಗಳಿಂದ ಜನರ ನಿದ್ದೆಗೆಡಿಸಿದೆ. ಹೇಗಾದರೂ ಮಾಡಿ ಸೋಂಕಿನಿಂದ ಬಚಾವಾಗಬೇಕು ಎಂದು ಜನರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಟರ್ಕಿಯಲ್ಲಿ ವ್ಯಕ್ತಿಯೊಬ್ಬ ಸತತ 14 ತಿಂಗಳುಗಳ ಕಾಲ ಕೋವಿಡ್ ಸೋಂಕಿಗೆ ಒಳಗಾಗಿದ್ದಾನೆ..!
56 ವರ್ಷ ಪ್ರಾಯದ ಮುಜಾಫರ್ ಕಯಾಸನ್ ಎಂಬ ಹೆಸರಿನ ವ್ಯಕ್ತಿಯು 2020 ರಿಂದ ಬರೋಬ್ಬರಿ 78 ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ ಟರ್ಕಿಯಲ್ಲಿ ಅತ್ಯಂತ ದೀರ್ಘ ಅವಧಿಯವರೆಗೆ ಕೋವಿಡ್ ಸೋಂಕಿಗೆ ಒಳಗಾದ ವ್ಯಕ್ತಿ ಎನಿಸಿದ್ದಾರೆ.
ಈಗಾಗಲೇ ಊಹೆಗೂ ನಿಲುಕದ ಕಷ್ಟವನ್ನು ಅನುಭವಿಸಿದ ಈತ 14 ತಿಂಗಳುಗಳ ಕಾಲ ಮನೆ ಹಾಗೂ ಆಸ್ಪತ್ರೆಯಲ್ಲಿಯೇ ಇದ್ದನು. ಅಂದರೆ ಒಂಬತ್ತು ತಿಂಗಳು ಆಸ್ಪತ್ರೆಯಲ್ಲಿ ಹಾಗೂ ಇನ್ನೊಂದು ಐದು ತಿಂಗಳು ಮನೆಯಲ್ಲಿ ಐಸೋಲೇಟ್ ಆಗಿದ್ದಾನೆ.
ನನಗೆ ಇಲ್ಲಿ ಬಂಧಿಯಾಗಿರಲು ಬೇರೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ನನ್ನ ಪ್ರೀತಿಪಾತ್ರರನ್ನು ಮುಟ್ಟಲೂ ನನಗೆ ಅವಕಾಶ ಇಲ್ಲದೇ ಇರುವುದೇ ನನಗೆ ಕಷ್ಟದ ವಿಚಾರವಾಗಿದೆ ಎಂದು ಮುಜಾಫರ್ ಹೇಳಿದನು.
ಲ್ಯುಕೇಮಿಯಾ ರೋಗಿಯಾಗಿರುವ ಮುಜಾಫರ್, 2020ರ ನವೆಂಬರ್ ತಿಂಗಳಲ್ಲಿ ಮೊಟ್ಟ ಮೊದಲ ಬಾರಿಗೆ ಕೋವಿಡ್ ಸೋಂಕಿಗೆ ಒಳಗಾದರು. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲೇ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಕಯಾಸನ್ ಕೊರೊನಾದಿಂದ ಬದುಕುಳಿಯುವ ಸಾಧ್ಯತೆ ಇಲ್ಲ ಎಂದೇ ವೈದ್ಯರು ಹೇಳಿದ್ದರು.
ಆದರೆ ಸ್ವಲ್ಪ ಸಮಯದ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಇದಾದ ಬಳಿಕ ಮುಜಾಫರ್ 78 ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ಪ್ರತಿ ಬಾರಿಯೂ ವರದಿ ಪಾಸಿಟಿವ್ ಎಂದೇ ಬಂದಿದೆ. 14 ತಿಂಗಳುಗಳ ಕಾಲ ಕೊರೊನಾದ ವಿರುದ್ಧ ಹೋರಾಡಿದ್ದರೂ ಸಹ ಅವರು ಇನ್ನೂ ಜೀವಂತವಾಗಿದ್ದಾರೆ. ಹಾಗೂ ಈ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡುತ್ತಿದ್ದಾರೆ.