ಬಿಟ್ರೂಟ್ ನಿಂದ ಹಲ್ವಾ, ಸಾಂಬಾರು, ಪಲ್ಯ ಮಾಡಿಕೊಂಡು ಸವಿದಿರುತ್ತೀರಿ. ಇಲ್ಲಿ ಬಿಟ್ರೂಟ್ ಬಳಸಿ ರುಚಿಕರವಾದ ಪಾಯಸ ಮಾಡುವುದು ಹೇಗೆ ಎಂಬುದರ ಕುರಿತು ಇದೆ. ಮನೆಯಲ್ಲಿ ಇದನ್ನೊಮ್ಮೆ ಮಾಡಿ ರುಚಿ ನೋಡಿ.
ಬೇಕಾಗುವ ಸಾಮಾಗ್ರಿ:
1 – ಬಿಟ್ರೂಟ್ (ತುರಿದುಕೊಂಡಿದ್ದು), ಹೆಸರುಬೇಳೆ – 1/2 ಕಪ್, ತುಪ್ಪ – 2 ಟೇಬಲ್ ಸ್ಪೂನ್, ಬೆಲ್ಲ – 1 ಕಪ್, ನೀರು – 2 ½ ಕಪ್, ತೆಂಗಿನಕಾಯಿ ಹಾಲು – 2 ಕಪ್, ಏಲಕ್ಕಿ ಪುಡಿ – 1 ಟೀ ಸ್ಪೂನ್, ಗೋಡಂಬಿ – 3 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಕೊಂಡು ನೀರು ಬಸಿದು ಒಂದು ಕಡೆ ಇಟ್ಟುಕೊಳ್ಳಿ. ಹಾಗೇ ಬೆಲ್ಲವನ್ನು ಒಂದು ಪ್ಯಾನ್ ಗೆ ಹಾಕಿ ಅದಕ್ಕೆ ½ ಕಪ್ ನೀರು ಸೇರಿಸಿ ಕರಗಿಸಿಕೊಂಡು ಸೋಸಿ ಒಂದು ಕಡೆ ಇಟ್ಟುಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಬಿಟ್ರೂಟ್ ತುರಿ, ಹೆಸರು ಬೇಳೆ ಹಾಕಿ 2 ನಿಮಿಷಗಳ ಕಾಲ ಹುರಿಯಿರಿ. ಬಳಿಕ ಇದಕ್ಕೆ 2 ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಿ.
ನೀರೆಲ್ಲಾ ಆರಿದ ಬಳಿಕ ಕರಗಿಸಿಕೊಂಡ ಬೆಲ್ಲ ಹಾಕಿ ಬೇಯಿಸಿಕೊಂಡು ಇದಕ್ಕೆ ತೆಂಗಿನಕಾಯಿ ಹಾಲು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ, ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ತುಪ್ಪದಲ್ಲಿ ಗೋಡಂಬಿ ಹುರಿದುಕೊಂಡು ಈ ಪಾಯಸಕ್ಕೆ ಹಾಕಿ ಸರ್ವ್ ಮಾಡಿ.