ಸೋಮವಾರದಂದು ಟರ್ಕಿ, ಸಿರಿಯಾದಲ್ಲಿ ಶತಮಾನದ ಪ್ರಬಲ ಭೂಕಂಪ ಸಂಭವಿಸಿದ್ದು, ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ನಿರಂತರವಾಗಿ ಪರಿಹಾರ ಕಾರ್ಯ ನಡೆಯುತ್ತಿದ್ದು ಒಂದೂವರೆ ಸಾವಿರಕ್ಕೂ ಅಧಿಕ ಕಟ್ಟಡಗಳು ಸಂಪೂರ್ಣವಾಗಿ ನೆಲಸಮವಾಗಿದೆ ಎಂದು ಹೇಳಲಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲಾಗುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದರ ಮಧ್ಯೆ ನೆದರ್ಲ್ಯಾಂಡ್ ಮೂಲದ ಸಂಶೋಧಕರೊಬ್ಬರು ಮೂರು ದಿನಗಳ ಹಿಂದಷ್ಟೇ ಈ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸುವುದರ ಕುರಿತು ಭವಿಷ್ಯ ನುಡಿದಿರುವುದು ಬಹಿರಂಗವಾಗಿದೆ. ಫ್ರಾಂಕ್ ಓಗರ್ ಬ್ರಿಟ್ಸ್, ಮಧ್ಯ ಪ್ರಾಚ್ಯ ಭಾಗದ ಸುತ್ತಮುತ್ತ ಇನ್ನು ಕೆಲವೇ ದಿನಗಳಲ್ಲಿ 7.5 ತೀವ್ರತೆಯ ಭೂಕಂಪನ ಸಂಭವಿಸಲಿದೆ ಎಂದು ಟ್ವೀಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.