ಮೈಸೂರಿನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ಜೀವವೈವಿಧ್ಯದ ಸ್ವರ್ಗವೆಂದೇ ಖ್ಯಾತವಾಗಿದೆ. ದೇಶದಲ್ಲಿರುವ ಪ್ರಮಖ ರಾಷ್ಟ್ರೀಯ ಉದ್ಯಾನಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಒಂದಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಉದ್ಯಾನ ಕೇರಳ, ತಮಿಳುನಾಡು ಅರಣ್ಯ ಶ್ರೇಣಿಗಳನ್ನು ಆವರಿಸಿಕೊಂಡಿದೆ. ಉತ್ತಮವಾದ ಹವಾಗುಣ ಇಲ್ಲಿದೆ. ವಿವಿಧ ಭೌಗೋಳಿಕ ಗುಣಗಳನ್ನುಳ್ಳ ಬಂಡೀಪುರ ರಾಷ್ಟ್ರೀಯ ಉದ್ಯಾನ ಅಪಾರವಾದ ವೈವಿಧ್ಯ ಸಸ್ಯಸಂಪತ್ತನ್ನು, ಪ್ರಾಣಿ, ಪಕ್ಷಿಗಳ ಸಂಕುಲವನ್ನು ಒಳಗೊಂಡು ನಿಸರ್ಗದ ಸೊಬಗಿನಿಂದ ಕೂಡಿದೆ.
ಬ್ರಿಟೀಷರ ಕಾಲದಲ್ಲಿಯೇ ಈ ಪ್ರದೇಶವನ್ನು ಮೀಸಲು ಅರಣ್ಯವೆಂದು ಘೋಷಿಸಲಾಗಿತ್ತು. ಮೈಸೂರು ಅರಸರು 1931 ರಲ್ಲಿ ಅರಣ್ಯ ರಕ್ಷತಾ ಕಾನೂನು ಜಾರಿಗೆ ತಂದರು. ಸುಮಾರು 90 ಕಿಲೋ ಮೀಟರ್ ವ್ಯಾಪ್ತಿ ಪ್ರದೇಶವನ್ನು ರಕ್ಷಿತಾರಣ್ಯವೆಂದು ಘೋಷಿಸಾಲಗಿತ್ತು. 1941 ರಲ್ಲಿ ವೇಣುಗೋಪಾಲ ವನ್ಯಜೀವಿ ಉದ್ಯಾನವೆಂದು ರಚಿಸಲಾಯಿತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಯೋಜನೆಯ ವ್ಯಾಪ್ತಿಗೆ 1973 ರಲ್ಲಿ ಬಂಡೀಪುರ ಕಾಡನ್ನು ಸೇರಿಸಲಾಯಿತು. ಬಂಡೀಪುರ ರಾಷ್ಟ್ರೀಯ ಉದ್ಯಾನದ ವಾಯುವ್ಯಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವಿದೆ. ದಕ್ಷಿಣಕ್ಕೆ ತಮಿಳುನಾಡಿನ ಮದುಮಲೈ, ನೈರುತ್ಯಕ್ಕೆ ಕೇರಳದ ವೈನಾಡು ವನ್ಯಜೀವಿ ಉದ್ಯಾನವಿದೆ. ಭಾರತದಲ್ಲಿ ಜೀವವೈವಿಧ್ಯ ರಕ್ಷಣೆಯ ಅತಿದೊಡ್ಡ ಪ್ರದೇಶ ಇದಾಗಿದೆ.
ಅನೇಕ ಬೆಟ್ಟ ಗುಡ್ಡಗಳಿಂದ ನದಿ, ತೊರೆಗಳಿಂದ ಬಂಡೀಪುರ ಉದ್ಯಾನವನ ಮನಮೋಹಕವಾಗಿದೆ. ದಟ್ಟ ಹಸಿರಿನ ನೀಲಗಿರಿ ಗಿರಿಶ್ರೇಣಿ, ಬಿಳಿ ಮೋಡಗಳು ಮುತ್ತಿಡುವ ದೃಶ್ಯ ರೋಮಾಂಚನವನ್ನುಂಟು ಮಾಡುತ್ತದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟಕ್ಕಿಂತ 1455 ಮೀಟರ್ ಎತ್ತರವಿದೆ. ಮಳೆಗಾಲದಲ್ಲಿ ಬಂಡೀಪುರ ಜೀವ ತುಂಬಿಕೊಳ್ಳುತ್ತದೆ.
ಹಕ್ಕಿಪಕ್ಷಿಗಳ ಕಲರವ, ಆನೆಗಳು, ಹುಲಿ, ಚಿರತೆ, ಜಿಂಕೆ ಮೊದಲಾದ ಪ್ರಾಣಿಗಳು ಸಹಜ ಪರಿಸರದಲ್ಲಿ ಕಾಣಸಿಗುತ್ತವೆ. ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಬಂಡೀಪುರದಲ್ಲಿ ವಿಹರಿಸಿ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.