ಮಸ್ಸೂರಿ ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಒಂದು ಜನಪ್ರಿಯ ಗಿರಿಧಾಮ ಹಾಗೂ ನವವಿವಾಹಿತರ ನೆಚ್ಚಿನ ಹನಿಮೂನ್ ತಾಣ. ಶಿವಾಲಿಕ್ ಶ್ರೇಣಿಯ ಹಿಮಾಲಯ ಮತ್ತು ಡೂನ್ ಕಣಿವೆಯ ಹಿನ್ನೆಲೆಯಲ್ಲಿ ದಿ ಹಿಲ್ಸ್ ರಾಣಿ ಎಂದೇ ಕರೆಯಿಸಿಕೊಳ್ಳುವ ಮಸ್ಸೂರಿ ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿದೆ.
ವರ್ಷದುದ್ದಕ್ಕೂ ತಂಪಾದ ಆಹ್ಲಾದಕರ ವಾತಾವರಣ ಇರುವ ಈ ತಾಣಕ್ಕೆ ಪ್ರವಾಸಿಗರ ಹಿಂಡೇ ಆಗಮಿಸುತ್ತಿರುತ್ತದೆ. ಬ್ರಿಟಿಷ್ ಯುಗದಲ್ಲಿ ಇದು ಜನಪ್ರಿಯ ರಜಾ ತಾಣವಾಗಿತ್ತು ಎಂಬುದಕ್ಕೆ ಹಲವು ಕುರುಹುಗಳು ಸಿಗುತ್ತವೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಯಮುನೋತ್ರಿ ಮತ್ತು ಗಂಗೋತ್ರಿಯಿಂದಲೂ ಇಲ್ಲಿಗೆ ಹೆಸರು ಬಂದಿದೆ.
ಜ್ವಾಲಾ ದೇವಿ ದೇವಾಲಯವು ಹಿಂದೂ ದೇವತೆ ದುರ್ಗೆಯ ಆರಾಧನೆಗೆ ಮುಡಿಪಾಗಿದೆ. ಇಲ್ಲಿರುವ ಗನ್ ಹಿಲ್, ಲಾಲ್ ಟಿಬ್ಬಾ ಮತ್ತು ನಾಗ್ ಟಿಬ್ಬಾ ಹಿಲ್ ಗಳು ಹಲವು ಐತಿಹಾಸಿಕ ಕಾರಣಗಳಿಂದ ಪ್ರಸಿದ್ಧಿ ಹೊಂದಿದೆ. ಇಲ್ಲಿರುವ ಕೆಂಪ್ಟಿ ಜಲಪಾತ, ಝಾರಿ ಪಾನಿ ಜಲಪಾತ, ಮೊಸ್ಸಿ ಜಲಪಾತ ಅಪಾರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.