ಚೀನಾದಲ್ಲಿ ನಡೆದ ವಿಚಿತ್ರ ಘಟನೆಯೊಂದು ವೈರಲ್ ಆಗಿದೆ. ತಂದೆ ಕೋಮಾದಲ್ಲಿದ್ದರೂ ಮಗ ಸಂಪ್ರದಾಯವನ್ನು ಹಠಕ್ಕೆ ಬಿದ್ದು ಪಾಲಿಸಿರೋದು ಬೆಳಕಿಗೆ ಬಂದಿದೆ. ಚೀನಾದ ಹುಬೈ ಪ್ರಾಂತ್ಯದ ವ್ಯಕ್ತಿ ಮೆದುಳಿನಲ್ಲಿ ರಕ್ತಸ್ರಾವವಾಗಿ ಆಸ್ಪತ್ರೆ ಸೇರಿದ್ದ. ಸುಮಾರು 6 ತಿಂಗಳುಗಳಿಂದ ಆತ ಕೋಮಾದಲ್ಲಿಯೇ ಇದ್ದಾನೆ.
ಇತ್ತೀಚೆಗಷ್ಟೆ ಆತನ ಮಗನ ಮದುವೆ ನೆರವೇರಿತ್ತು. ಮಗನ ಮದುವೆಯ ನಂತರ ಕೆಲವೊಂದು ವಸ್ತುಗಳನ್ನು ಕೆಂಪು ಬಣ್ಣದ ಪ್ಯಾಕೆಟ್ನಲ್ಲಿಟ್ಟು ತಂದೆ ವಧು-ವರರಿಗೆ ನೀಡಬೇಕೆಂಬ ಸಂಪ್ರದಾಯ ಅಲ್ಲಿದೆ. ಆದರೆ ತಂದೆ ಕೋಮಾದಲ್ಲಿ ಇದ್ದಿದ್ದರಿಂದ ಇದನ್ನು ನೆರವೇರಿಸುವುದು ಸಾಧ್ಯವಿರಲಿಲ್ಲ. ಪಟ್ಟು ಬಿಡದ ಮಗ ಆಸ್ಪತ್ರೆಯವರಿಂದ ಅನುಮತಿ ಪಡೆದುಕೊಂಡು ಆ ಸಂಪ್ರದಾಯವನ್ನು ನೆರವೇರಿಸಿದ್ದಾನೆ.
ವಧು-ವರರಿಬ್ಬರೂ ತಂದೆ ಅಡ್ಮಿಟ್ ಆಗಿದ್ದಲ್ಲಿಗೆ ಬಂದು ಕೋಮಾದಲ್ಲಿದ್ದ ಆತನ ಕೈಯ್ಯಲ್ಲಿ ಕೆಂಪನೆಯ ಪ್ಯಾಕೆಟ್ ಒಂದನ್ನು ಹಿಡಿಸಿದ್ದಾರೆ. ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಿದ್ದರಿಂದ ಕೆಲ ಸಮಯದ ಬಳಿಕ ಅದನ್ನು ತಾವೇ ವಾಪಸ್ ಪಡೆದುಕೊಂಡಿದ್ದಾರೆ.
ಈ ಸಂಪ್ರದಾಯ ಪಾಲಿಸಿದ್ರೆ ಅವರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ ಎಂಬುದು ನಂಬಿಕೆ. ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲವಂತೆ. ಅದೇನೇ ಆಗಿದ್ದರೂ ಇಂತಹ ಸಂದರ್ಭಗಳಲ್ಲಿಯೂ ಆಚರಣೆಗಳನ್ನು ಮಾಡಿದ್ದು ನೆಟ್ಟಿಗರಿಗೆ ಕೋಪ ತರಿಸಿದೆ.