ಹಾಸನ ಟಿಕೆಟ್ ಫೈಟ್ ಈಗಾಗಲೇ ಜೋರಾಗಿದೆ. ಇದರ ನಡುವೆ ಟಾಕ್ ವಾರ್ ಕೂಡ ಪ್ರಾರಂಭವಾಗಿದೆ. ಹಾಸನ ಟಿಕೆಟ್ ವಿಚಾರದಲ್ಲಿ ದೇವೇಗೌಡರೇ ಫೈನಲ್ ಎಂಬ ಮಾತು ಕುಮಾರಸ್ವಾಮಿಯವರನ್ನು ಸಿಟ್ಟಿಗೇಳುವಂತೆ ಮಾಡಿತ್ತು. ಅದರ ಬೆನ್ನಲ್ಲೇ ರೇವಣ್ಣ ಫುಲ್ ಸ್ಟಾಪ್ ಇಡಲು ಪ್ರಯತ್ನ ಮಾಡುವ ಕೆಲಸ ಮಾಡಿದ್ದರು. ಇದರ ಜೊತೆಗೆ ನಿಖಿಲ್ ಹಾಗೂ ಅನಿತಾ ಕುಮಾರಸ್ವಾಮಿಯವರ ಹೆಸರೇಳಿ ರಾಜಕೀಯ ದಾಳ ಉರುಳಿಸಿದ್ರಾ ಅನ್ನೋ ಚರ್ಚೆ ಶುರುವಾಗಿದೆ.
ನಿಖಿಲ್ ರಾಮನಗರದಿಂದ ಗೆಲ್ತಾನೆ, ಅನಿತಾ ಕುಮಾರಸ್ವಾಮಿ ಮಧುಗಿರಿಯಲ್ಲಿ ಗೆಲ್ತಾರೆ ಎಂಬ ರೇವಣ್ಣನವರ ಹೇಳಿಕೆ ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅವರ ಹೇಳಿಕೆ ಪ್ರಕಾರ ಇಬ್ಬರಿಗೂ ಟಿಕೆಟ್ ಕೊಡ್ತಾ ಇದ್ದೀರಾ ನಮಗೂ ಟಿಕೆಟ್ ಕೊಡಿ ಅನ್ನೋ ಮಾತಿನ ಅರ್ಥವಾ..? ಇಬ್ಬರ ಹೆಸರೇಳಿ ಪತ್ನಿಗೆ ಟಿಕೆಟ್ ಕೊಡಿಸುವ ಪ್ರಯತ್ನವಾ ಅನ್ನೋ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿರೋದಂತೂ ಸತ್ಯ. ನಿಖಿಲ್, ಅನಿತಾ ಕುಮಾರಸ್ವಾಮಿ ಗೆಲ್ತಾರೆ. ಅದು ಅವರ ಸ್ವಂತ ಬಲದ ಮೇಲೆ ಅನ್ನೋ ಮೂಲಕ ತಮ್ಮ ಪತ್ನಿಯೂ ಸ್ವಂತ ಬಲದ ಮೇಲೆ ಗೆಲ್ತಾರೆ ಅನ್ನೋ ಮಾತನ್ನು ಪರೋಕ್ಷವಾಗಿ ಹೇಳಿದ್ದಾರಾ ರೇವಣ್ಣ..?
ಇನ್ನು ಈಗಾಗಲೇ ರೇವಣ್ಣನವರೇ ಹೇಳಿದಂತೆ ಟಿಕೆಟ್ ಫೈನಲ್ ವಿಚಾರದಲ್ಲಿ ದೇವೇಗೌಡರು, ಕುಮಾರಸ್ವಾಮಿ, ಹಾಗೂ ಇಬ್ರಾಹಿಂ ನಿರ್ಧಾರ ಅಂತಿಮ ಅಂತೆ. ರೇವಣ್ಣ ರಾಜಕೀಯದಲ್ಲಿ ಅನುಭವ ಇರುವ ರಾಜಕಾರಣಿ. ಹಾಗಾಗಿ ಸಮಯ ತೆಗದುಕೊಂಡು ದಾಳ ಉರುಳಿಬಿಟ್ರಾ ಅನ್ನೋ ಚರ್ಚೆಯಂತೂ ಇದೆ. ಇವರಿಬ್ಬರ ಹೆಸರೇಳಿ ನಮಗೂ ಟಿಕೆಟ್ ಕೊಡಿ ಅಂತ ಪರೋಕ್ಷವಾಗಿ ಕೇಳಿದ್ದಂತಿದೆ. ಇಷ್ಟೆಲ್ಲ ಬೆಳವಣಿಗಳ ನಡುವೆ ಹಾಸನ ಟಿಕೆಟ್ ಫೈನಲ್ ಇನ್ನೂ ಆಗಿಲ್ಲ.