ಮಕ್ಕಳ ಲಾಲನೆ-ಪಾಲನೆ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. 0-1 ವರ್ಷದವರೆಗಿನ ಮಕ್ಕಳಿಗೆ ಹೆಚ್ಚಿನ ಆರೈಕೆ ಬೇಕು. ಶರೀರದಲ್ಲಿ ಯಾವ ಸಮಸ್ಯೆಯಾಗ್ತಾ ಇದೆ ಎಂಬುದನ್ನು ಮಕ್ಕಳಿಗೆ ಹೇಳಲು ಬರುವುದಿಲ್ಲ.
ಹಾಗೆ ದೊಡ್ಡವರಂತೆ ಎಲ್ಲ ಆಹಾರ ಸೇವನೆ ಮಾಡಿ ಜೀರ್ಣಿಸಿಕೊಳ್ಳುವ ಶಕ್ತಿ ಅವುಗಳಿಗಿರುವುದಿಲ್ಲ. ಮಹತ್ವದ ವಿಷಯವೆಂದ್ರೆ ಮಕ್ಕಳ ದೇಹ ಬೆಳವಣಿಗೆಯಾಗುವ ಸಮಯ ಇದಾಗಿದ್ದು, ಈ ವೇಳೆ ನಾವು ನೀಡುವ ಆಹಾರ ಅವರ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.
ಚಿಕ್ಕ ಮಕ್ಕಳಿಗೆ ಸಕ್ಕರೆ ಹಾಗೂ ಉಪ್ಪನ್ನು ನೀಡಲೇಬಾರದು ಎಂದು ತಜ್ಞರು ಹೇಳ್ತಾರೆ. ಕಡ್ಡಾಯವಾಗಿ ಆರು ತಿಂಗಳವರೆಗೆ ಮಕ್ಕಳಿಗೆ ತಾಯಿ ಹಾಲನ್ನು ಮಾತ್ರ ನೀಡಬೇಕು. ಒಂದು ವರ್ಷದವರೆಗೆ ಬರೀ ತಾಯಿ ಹಾಲು ನೀಡಿದ್ರೆ ತೊಂದರೆಯೇನೂ ಇಲ್ಲ. ಅವಶ್ಯವೆನಿಸಿದ್ರೆ ಹಣ್ಣು ಹಾಗೂ ತರಕಾರಿಯನ್ನು ನೀಡಬಹುದು. ಆದ್ರೆ ಯಾವುದೇ ಕಾರಣಕ್ಕೂ ಸಕ್ಕರೆ ಹಾಗೂ ಉಪ್ಪನ್ನು ನೀಡಬೇಡಿ.
ಇನ್ನೂ ಮಕ್ಕಳ ಹಲ್ಲುಗಳು ಬೆಳವಣಿಗೆ ಹೊಂದಿರುವುದಿಲ್ಲ. ಹಣ್ಣಿನಲ್ಲಿರುವ ಸಕ್ಕರೆ ಅಂಶ ಮಕ್ಕಳಿಗೆ ಸಾಕಾಗುತ್ತದೆ. ನಾವು ಪ್ರತ್ಯೇಕವಾಗಿ ಸಕ್ಕರೆ ನೀಡಿದ್ರೆ ಅದು ಹಲ್ಲಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಶುಗರ್ ಕಾಡಬಹುದು.
ಉಪ್ಪು ಕೂಡ ಮಕ್ಕಳಿಗೆ ಒಳ್ಳೆಯದಲ್ಲ. ಅದು ಎಲುಬುಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಮಕ್ಕಳಿಗೆ 1 ಗ್ರಾಂ ಉಪ್ಪು ಸಾಕಾಗುತ್ತದೆ. ಇದು ತರಕಾರಿ ಮೂಲಕ ಮಕ್ಕಳ ದೇಹ ಸೇರುತ್ತದೆ. ಇದಕ್ಕಿಂತ ಹೆಚ್ಚು ಉಪ್ಪು ದೇಹ ಸೇರಿದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ಕಿಡ್ನಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.