ಸಂಕಟ ಬಂದಾಗ ವೆಂಕಟ ರಮಣ ಎನ್ನುವವರಿದ್ದಾರೆ. ಅನೇಕರು ಹೀಗೆ ಮಾಡ್ತಾರೆ. ಯಾವುದೋ ಬೇಡಿಕೆ ಮುಂದಿಟ್ಟುಕೊಂಡು ದೇವರಿಗೆ ತಮ್ಮ ಭಕ್ತಿ ಪ್ರದರ್ಶಿಸಲು ಮುಂದಾಗ್ತಾರೆ. ಭಕ್ತಿ, ಆರಾಧನೆ, ಪೂಜೆ ಬದಲು ಅವ್ರು ತಮ್ಮ ಬೇಡಿಕೆ ಈಡೇರಿಸುವಂತೆ ಕೇಳ್ತಾರೆ.
ಆದ್ರೆ ನಿಜವಾದ ಭಕ್ತ ದೇವರ ಮುಂದೆ ಯಾವುದೇ ಬೇಡಿಕೆಯನ್ನು ಇಡಬಾರದು. ದಂತಕಥೆಯೊಂದರ ಪ್ರಕಾರ, ರಾಜನ ಆಸ್ಥಾನಕ್ಕೆ ಹೊಸ ಸೇವಕರು ಬಂದಿದ್ದರಂತೆ. ಸೇವಕರಿಗೆ ರಾಜ ಕೆಲ ಪ್ರಶ್ನೆಗಳನ್ನು ಕೇಳ್ತಾನೆ.
ನಿಮ್ಮ ಹೆಸರೇನು? ನೀವು ಯಾವ ಕೆಲಸ ಮಾಡಲು ಬಯಸುತ್ತೀರಿ? ನೀವು ಯಾವ ಬಟ್ಟೆ ಧರಿಸುತ್ತೀರಿ? ನಿಮ್ಮ ಆಹಾರ ಯಾವುದು? ಎಂದು ಪ್ರಶ್ನೆ ಮಾಡ್ತಾನೆ. ಈ ಎಲ್ಲ ಪ್ರಶ್ನೆಗಳಿಗೆ ಸೇವಕ, ನೀವು ಹೇಳಿದಂತೆ ನಾವು ನಡೆಯುತ್ತೇವೆ. ನೀವು ಇಟ್ಟ ಹೆಸರೇ ನಮ್ಮ ಹೆಸರು, ನೀವು ನೀಡಿದ ಕೆಲಸ ಮಾಡುತ್ತೇವೆ. ನೀವು ಕೊಟ್ಟ ಬಟ್ಟೆ ಧರಿಸುತ್ತೇವೆ. ನೀವು ನೀಡಿದ ಆಹಾರ ತಿನ್ನುತ್ತೇವೆ ಎನ್ನುತ್ತಾರೆ. ಕೊನೆಯದಾಗಿ ರಾಜ, ನಿಮ್ಮ ಆಸೆ ಏನು ಕೇಳ್ತಾನೆ. ನಮಗೆ ಆಸೆಗಳಿಲ್ಲ. ರಾಜನ ಸೇವೆ ನಮ್ಮ ಗುರಿ ಎನ್ನುತ್ತಾರೆ.
ಇದ್ರಿಂದ ಆಕರ್ಷಿತರಾದ ರಾಜ, ಸೇವಕನನ್ನು ಗುರುವಾಗಿ ನೇಮಕ ಮಾಡಿಕೊಳ್ತಾನೆ. ನಿಮ್ಮಿಂದ ನನಗೆ ಸಾಕಷ್ಟು ತಿಳಿಯಿತು. ಭಕ್ತನಾದವನು ದೇವರ ಮುಂದೆ ಬೇಡಿಕೆಯಿಡಬಾರದು. ಸೇವೆ ಮಾಡ್ತಾ ಹೋದ್ರೆ ದೇವರು ಒಲಿಯುತ್ತಾನೆಂದು ರಾಜನಿಗೆ ಅರಿವಾಯ್ತು ಎನ್ನುತ್ತಾನೆ ರಾಜ.