ನಿಮ್ಮ ಉಗುರಿನ ಬಣ್ಣ ನೋಡಿಯೇ ನಿಮ್ಮ ಆರೋಗ್ಯದ ಸ್ಥಿತಿಗತಿಗಳನ್ನು ಹೇಳಬಹುದು. ಹೇಗೆನ್ನುತ್ತೀರಾ?
ನಿಮ್ಮ ಉಗುರುಗಳು ಗಮನಿಸುವಂಥ ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಹೃದಯಕ್ಕೆ ಸಂಬಂಧಿಸಿದ ಅಥವಾ ಇನ್ನಾವುದೋ ಸಮಸ್ಯೆ ಇದೆ ಎಂದರ್ಥ. ಹೀಗಾಗಿ ಉಗುರಿನ ಬಣ್ಣ ಕೆಂಪಗಾಗುತ್ತಾ ಬಂದರೆ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಕಾಣಿ.
ನಿಮ್ಮ ದೇಹದ ತ್ವಚೆಯ ಬಣ್ಣ ಬೆಳ್ಳಗಿರಲಿ ಅಥವಾ ಕಪ್ಪಾಗಿರಲಿ, ಉಗುರಿನ ಬಣ್ಣ ಸದಾ ತಿಳಿಗುಲಾಬಿ ಬಣ್ಣದಲ್ಲೇ ಇರುತ್ತದೆ. ಕೆಲವೊಮ್ಮೆ ಇದು ಬಿಳಿ ಬಣ್ಣಕ್ಕೆ ತಿರುಗುವುದುಂಟು. ಅದು ಯಕೃತ್ತಿನ ಸಮಸ್ಯೆಯ ಲಕ್ಷಣವಿರಬಹುದು. ಹಾಗಾಗಿ ಈ ಸಂದರ್ಭದಲ್ಲೂ ವೈದ್ಯರನ್ನು ಕಾಣುವುದು ಬಹಳ ಮುಖ್ಯ.
ಕೆಲವರ ಉಗುರು ದಪ್ಪವಾಗಿರುತ್ತದೆ. ವಯಸ್ಸಾದ ಬಳಿಕ ಇದು ಸಾಮಾನ್ಯವಿರಬಹುದು. ಸಣ್ಣ ವಯಸ್ಸಿನಲ್ಲಿರುವಾಗಲೇ ಉಗುರು ದಪ್ಪವಾಗಿ ಅಸಾಮಾನ್ಯ ವೇಗದಲ್ಲಿ ಬೆಳೆದರೆ ಅದೂ ಸೋಂಕಿನ ಅಥವಾ ಅನಾರೋಗ್ಯದ ಲಕ್ಷಣವೇ. ಉಗುರು ಬಹುಬೇಗ ತುಂಡಾಗುತ್ತಿದ್ದರೆ ಹೈಪರ್ ಥೈರಾಯ್ಡ್ ಲಕ್ಷಣವಿರಬಹುದು. ಮಸುಕಾದ ಉಗುರುಗಳು ರಕ್ತಹೀನತೆ ಅಥವಾ ಅಪೌಷ್ಟಿಕತೆಯ ಲಕ್ಷಣವಿರಬಹುದು.