ಯಾವುದೇ ಚುನಾವಣೆಗಳು ನಡೆಯುವ ಮುನ್ನ ಪಕ್ಷಾಂತರ ಪರ್ವ ಆರಂಭವಾಗುತ್ತದೆ. ಈ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಇದು ಈಗಾಗಲೇ ಶುರುವಾಗಿದೆ.
ಆದರೆ ಯಾವುದೇ ಒಂದು ಪಕ್ಷದಿಂದ ಆಯ್ಕೆಯಾದ ಶಾಸಕರು ಸ್ಥಾನ ಅನರ್ಹಗೊಳ್ಳುವ ಭೀತಿಯಿಂದ ಈಗಲೇ ಮತ್ತೊಂದು ಪಕ್ಷ ಸೇರ್ಪಡೆಗೊಳ್ಳಲು ಹಿಂಜರಿಯುತ್ತಾರೆ. ಆದರೆ ತಮ್ಮ ಚಟುವಟಿಕೆಗಳ ಮೂಲಕ ತಾವು ಇರುವ ಹಾಲಿ ಪಕ್ಷವನ್ನು ತೊರೆಯುವ ಇಂಗಿತ ವ್ಯಕ್ತಪಡಿಸುತ್ತಿರುತ್ತಾರೆ.
ಇದೇ ರೀತಿ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರೇ ಇದನ್ನು ದೃಢಪಡಿಸಿದ್ದಾರೆ.
ಶನಿವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಹಾಗೂ ಅರಸಿಕೆರೆ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದನ್ನು ಪರೋಕ್ಷವಾಗಿ ತಿಳಿಸಿದ್ದು, ಅರಕಲಗೂಡಿಗೆ ಮಾಜಿ ಸಚಿವ ಎ. ಮಂಜು ಅಭ್ಯರ್ಥಿಯಾಗಲಿದ್ದಾರೆ ಹಾಗೂ ಅರಸೀಕೆರೆ ಕ್ಷೇತ್ರಕ್ಕೂ ಈಗಾಗಲೇ ಪರ್ಯಾಯ ಅಭ್ಯರ್ಥಿಯನ್ನು ಹುಡುಕಲಾಗಿದೆ ಎಂದು ಹೇಳಿದ್ದಾರೆ.