‘ಆಧಾರ್’ ಮಾಡಿಸಿಕೊಳ್ಳುವ ವೇಳೆ ಮೊಬೈಲ್ ಸಂಖ್ಯೆ ನೀಡುವುದು ಅಗತ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಮೊಬೈಲ್ ನಂಬರ್ ತಪ್ಪಾದ ಸಂದರ್ಭದಲ್ಲಿ ಮತ್ತೊಬ್ಬರಿಗೆ ಓಟಿಪಿ ಹೋಗುತ್ತದೆ. ಇ ಮೇಲ್ ವಿಚಾರದಲ್ಲೂ ಸಹ ಇದೇ ಸಮಸ್ಯೆ ಇದ್ದು, ಇದೀಗ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಇದರ ನಿವಾರಣೆಗೆ ಕ್ರಮವೊಂದನ್ನು ಕೈಗೊಂಡಿದೆ.
ಆಧಾರ್ ಕಾರ್ಡ್ ಹೊಂದಿರುವವರು ಲಿಂಕ್ ಆಗಿರುವ ತಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಪರಿಶೀಲಿಸಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇದಕ್ಕಾಗಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವೆಬ್ಸೈಟ್ https://myaadhar.uidai.gov.in ಅಥವಾ ಮೊಬೈಲ್ ಆಪ್ mAadhar ಬಳಸಿಕೊಳ್ಳಬಹುದಾಗಿದೆ.
ವೆಬ್ಸೈಟ್ ಗೆ ಭೇಟಿ ನೀಡಿದ ವೇಳೆ ವೆರಿಫೈ ಇ-ಮೇಲ್, ಮೊಬೈಲ್ ನಂಬರ್ ವೈಶಿಷ್ಟ್ಯದ ಮೇಲೆ ಕ್ಲಿಕ್ ಮಾಡಿ ವಿವರಗಳನ್ನು ನಮೂದಿಸಬೇಕಾಗುತ್ತದೆ. ಬಳಿಕ ಸೆಂಡ್ ಒಟಿಪಿ ಬಟನ್ ಒತ್ತಿದರೆ ನಿಮ್ಮ ನಂಬರ್ ಸರಿ ಇದ್ದರೆ ವೆರಿಫೈ ಎಂಬ ಸಂದೇಶ ಬರುತ್ತದೆ.
ಒಂದೊಮ್ಮೆ ಲಿಂಕ್ ಮಾಡಿದ ಮೊಬೈಲ್ ನಂಬರ್ ನೆನಪಿರದಿದ್ದಲ್ಲಿ ವೆರಿಫೈ ಆಧಾರ್ ಆಪ್ಷನ್ ನಲ್ಲಿ ಮೊಬೈಲ್ ಸಂಖ್ಯೆಯ ಕೊನೆಯ ಮೂರು ಅಂಕಿಗಳನ್ನು ನಮೂದಿಸಬಹುದಾಗಿದೆ. ಆ ನಂಬರ್ ಆಧಾರ್ ಗೆ ಲಿಂಕ್ ಆಗಿಲ್ಲದಿದ್ದರೆ ಅಪ್ಡೇಟ್ ಮಾಡಲು ಕ್ರಮ ಕೈಗೊಳ್ಳಿ ಎಂಬ ಸಂದೇಶ ಬರಲಿದ್ದು, ಬಳಿಕ ಸಮೀಪದ ಕೇಂದ್ರಕ್ಕೆ ತೆರಳಿ ಮೊಬೈಲ್, ಇಮೇಲ್ ಲಿಂಕ್ ಮಾಡಿಕೊಳ್ಳಬಹುದಾಗಿದೆ.