ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ್ ಫಾಲ್ಸ್ ಸಮೀಪದ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಗಿಣಿ ಗ್ರಾಮದ ಬಳಿಯ ಕಾಡಿನಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಕುದ್ರೋಳ ಹಾವು ಪತ್ತೆಯಾಗಿದೆ.
ನಾಗರ ಹಾವಿಗಿಂತಲು 5 ಪಟ್ಟು ಹೆಚ್ಚು ವಿಷಕಾರಿಯಾಗಿರುವ ಈ ಹಾವು ಐದು ಅಡಿ ಉದ್ದವಿದ್ದು, ಇದರ ವೈಜ್ಞಾನಿಕ ಹೆಸರು ರೆಸೆಲ್ ವೈಫರ್ ಎಂದು ಹೇಳಲಾಗಿದೆ. ಭಾರತದ ನಾಲ್ಕು ದೊಡ್ಡ ಹಾವುಗಳಲ್ಲಿ ಇದು ಕೂಡಾ ಒಂದು ಎಂದು ಪರಿಗಣಿಸಲಾಗಿದೆ.
ಒಣಗಿದ ಎಲೆಗಳ ಬಣ್ಣವನ್ನೇ ಹೋಲುವ ಈ ಹಾವು ಹೆಚ್ಚಾಗಿ ಕರಾವಳಿ ಹಾಗೂ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಅತಿ ವಿರಳವಾಗಿ ಕಂಡು ಬರುತ್ತದೆ. ಎಲೆಗಳ ಬಣ್ಣ ಇರುವ ಕಾರಣ ಅದರ ಮಧ್ಯೆ ಇದು ಸುರುಳಿ ಸುತ್ತಿಕೊಂಡು ಮಲಗಿದರೆ ಯಾರ ಕಣ್ಣಿಗೂ ಅಷ್ಟು ಸುಲಭವಾಗಿ ಗೋಚರವಾಗುವುದಿಲ್ಲ. ಹಾಗಾಗಿ ಕಾಡಿನಲ್ಲಿ ಓಡಾಡುವವರು ಅತಿ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.