ಮದುವೆ ಸಮಾರಂಭದಲ್ಲಿ ಊಟ ರುಚಿಯಾಗಿತ್ತೆಂದು ಹೊಟ್ಟೆ ತುಂಬಾ ತಿಂದೀರಾ…? ಅದೀಗ ಅಜೀರ್ಣವಾಗಿದೆಯೇ…? ಹೊಟ್ಟೆ ಭಾರ ಎನಿಸುತ್ತಿದೆಯೇ…? ಇದಕ್ಕೆಲ್ಲಾ ಜೀರಿಗೆ ಒಂದೇ ಮದ್ದು. ಅದನ್ನು ಬಳಸುವ ವಿಧಾನ ಇಲ್ಲಿದೆ ಕೇಳಿ.
ಮೊದಲು ಅರ್ಧ ಚಮಚ ಜೀರಿಗೆ ಮತ್ತು ಒಂದು ಕಲ್ಲು ಉಪ್ಪನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಅದರಿಂದ ಬಂದ ರಸವನ್ನು ಮಾತ್ರ ಕುಡಿಯಿರಿ. ಕೊನೆಗೆ ಉಳಿಯುವ ಚೊಗಟೆಯನ್ನು ಉಗಿಯಿರಿ. ಇದರಿಂದ ನಿಮ್ಮ ಹೊಟ್ಟೆ ಭಾರ ಕಡಿಮೆಯಾಗುತ್ತದೆ.
ಜೀರಿಗೆ ಹುರಿದು ಇಟ್ಟುಕೊಂಡರೆ ಇದರ ಪುಡಿಯನ್ನು ಬಾಯಿಗೆ ಹಾಕಿಕೊಂಡು ಬಿಸಿನೀರು ಕುಡಿದರೂ ಸಾಕು. ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಓಂ ಕಾಳು ಮತ್ತು ಜೀರಿಗೆಯನ್ನು ಹುರಿದು ಪುಡಿ ಮಾಡಿ ಒಂದು ಲೋಟ ನೀರಿಗೆ ಬೆರೆಸಿ ಕುದಿಸಿ ಅರ್ಧ ಲೋಟಕ್ಕೆ ಇಳಿಯುತ್ತಲೇ ಸೋಸಿ ಮಕ್ಕಳಿಗೆ ಕುಡಿಸಿದರೆ ಹಾಳು ಮೂಳು ತಿಂದು ಹಸಿವಿಲ್ಲ ಎನ್ನುವ ಮಕ್ಕಳು ಎರಡು ಗಂಟೆಯೊಳಗೆ ಹಸಿವೆಂದು ಓಡಿ ಬರುತ್ತವೆ.
ಸೋಡಾದ ಪ್ರಭಾವವನ್ನು ಈ ಕಷಾಯ ನೀಡುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲ. ಹಾಗಾಗಿ ಮಕ್ಕಳು ಅಥವಾ ಹಿರಿಯರು ಎಲ್ಲರೂ ಸೇವಿಸಬಹುದು.
ಜೀರಿಗೆ ಪುಡಿಯನ್ನು ನೀರಿಗೆ ಹಾಕಿ ಕುದಿಸಿ, ಬೆಲ್ಲ, ಹಾಲು ಸೇರಿಸಿ ಕುಡಿಯುವುದರಿಂದ ದೇಹಕ್ಕೂ ತಂಪು. ಚೈತನ್ಯವೂ ಸಿಗುತ್ತದೆ. ರಕ್ತಹೀನತೆಯನ್ನೂ ಇದು ಕಡಿಮೆ ಮಾಡುತ್ತದೆ.
ಅಸ್ತಮಾ ರೋಗಿಗಳು ಹುರಿದ ಜೀರಿಗೆ ಪುಡಿ ಹಾಕಿದ ಬಿಸಿ ನೀರು ಕುಡಿಯುವುದರಿಂದ ದಮ್ಮಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.