ಬೇಕಾಗುವ ಪದಾರ್ಥಗಳು :
6 ಮೊಟ್ಟೆ, 50 ಗ್ರಾಂ ಈರುಳ್ಳಿ, 50 ಗ್ರಾಂ ಟೊಮೆಟೋ, 100 ಗ್ರಾಂ ಹಸಿ ಬಟಾಣಿ, 7-8 ಬೆಳ್ಳುಳ್ಳಿ ಎಸಳು, 2 ಚಮಚ ಗಸಗಸೆ, 1 ಎಸಳು ಕರಿಬೇವಿನಸೊಪ್ಪು, 1 ಚೂರು ಹಸಿಶುಂಠಿ, ಕರಿಯಲು ಎಣ್ಣೆ, 3-4 ಒಣ ಮೆಣಸಿನಕಾಯಿ, 1 ಚಮಚ ಅರಿಶಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಬಟ್ಟಲು ಮೊಸರು, 1 ಕಂತೆ ಕೊತ್ತಂಬರಿ ಸೊಪ್ಪು.
ತಯಾರಿಸುವ ವಿಧಾನ :
ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ಸುಲಿಯಿರಿ. ಸಣ್ಣಗಿನ ದಾರದಿಂದ ಮೊಟ್ಟೆಗಳನ್ನು ಲಂಬಾಕಾರದಲ್ಲಿ ನಾಲ್ಕು ಚೂರುಗಳಾಗಿ ಮಾಡಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿರಿ. ಮೊಸರನ್ನು ಕಡೆಯಿರಿ. ಹಸಿ ಬಟಾಣಿಯನ್ನು ಬೇಯಿಸಿಡಿ. ಒರಳಿನಲ್ಲಿ ಟೊಮೊಟೋ, ಹಸಿ ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ಹುರಿದ ಒಣ ಮೆಣಸಿನಕಾಯಿ, ಗಸಗಸೆ, ಅರಿಶಿನಪುಡಿ, ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ರುಬ್ಬಿರಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಲೆಯ ಮೇಲಿಡಿ. ಈರುಳ್ಳಿ ಚೂರುಗಳನ್ನು ಹುರಿಯಿರಿ. ಕರಿಬೇವಿನ ಸೊಪ್ಪನ್ನು ಸೇರಿಸಿ. ಕರಿಬೇವಿನ ಸೊಪ್ಪು ಬಾಡಿದಾಗ, ಬೇಯಿಸಿದ ಬಟಾಣಿಯನ್ನು ಸೇರಿಸಿ 4-5 ನಿಮಿಷ ಹುರಿಯಿರಿ. ನಂತರ ರುಬ್ಬಿಟ್ಟ ಮಸಾಲೆಯನ್ನು ಸೇರಿಸಿ, ಉಪ್ಪು ಬೆರೆಸಿರಿ. ಮಸಾಲೆ ಎಲ್ಲವೂ ಚೆನ್ನಾಗಿ ಬೆಂದಾಗ ಪಾತ್ರೆಯನ್ನು ಕೆಳಗಿಳಿಸಿ. ಕಡೆದ ಮೊಸರನ್ನು ಸೇರಿಸಿ ಚೆನ್ನಾಗಿ ಕಲೆಸಿ. ಕೊನೆಯಲ್ಲಿ ಮೊಟ್ಟೆ ಚೂರುಗಳನ್ನು ಸೇರಿಸಿ.