ಭುವನೇಶ್ವರ: ಸಿಡಿಲು ಬಡಿದು 11 ಜನರು ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಒಡಿಶಾದ ಕೊರಾಪುಟ್, ಗಂಜಾಮ್, ಜಾಜ್ ಪುರ, ಧೆಂಕನಲ್, ಬಾಲಾಸೋರ್, ಮಯೂರ್ ಭಂಜ್ ಜಿಲ್ಲೆಗಳಲ್ಲಿ ವಿವಿಧೆಡೆ ಸಂಭವಿಸಿದ ಭಾರಿ ಸಿಡಿಲಿಗೆ ಮಹಿಳೆಯರು, ಮಕ್ಕಳು ಸೇರಿ 11 ಜನರು ಬಲಿಯಾಗಿದ್ದಾರೆ.
ಕೊರಾಪುಟ್ ಜಿಲ್ಲೆಯ ಸೆಮಿಲಿಗುಡಾ ಬ್ಲಾಕ್ ಹಾಗೂ ಲಕ್ಷ್ಮೀಪುರದ ಪರಡಿಗುಡಾ ಗ್ರಾಮದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಭತ್ತದ ಗದ್ದೆಯ ಬಳಿ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದಾಗ ಸಿಡಿಲುಬಡಿದು ಮೃತಪಟ್ಟಿದ್ದಾರೆ.
ಒಡಿಶಾದ ಹಲವೆಡೆ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಿದ್ದು 11 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಹಲವೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ.