ತಮಿಳುನಾಡಿನ ವಾಲ್ಪರೈನಲ್ಲಿ ಸೋಮವಾರ ಸಂಜೆ ಸಂಭವಿಸಿದ ಹೃದಯ ವಿದ್ರಾವಕ ಘಟನೆಯಲ್ಲಿ, ಹಿತ್ತಲಿನಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಚಿರತೆಯೊಂದು ದಿಢೀರ್ ದಾಳಿಗೆ ಮುಂದಾಗಿತ್ತು. ಆದರೆ, ಮನೆಯಲ್ಲಿದ್ದ ಎರಡು ಸಾಕು ನಾಯಿಗಳ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಮಗುವಿನ ಪ್ರಾಣ ಉಳಿದಿದೆ. ಸಂಜೆ ಸುಮಾರು 5 ಗಂಟೆಗೆ ಈ ಘಟನೆ ನಡೆದಿದ್ದು, ಇದರ ಭಯಾನಕ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ವಾಲ್ಪರೈನ ರೊಟ್ಟಿ ಅಂಗಡಿಯ ಸಮೀಪ ವಾಸಿಸುವ ಶಿವಕುಮಾರ್ ಮತ್ತು ಸತ್ಯ ಎಂಬ ದಂಪತಿಗಳ ಮನೆಯ ಹಿತ್ತಲಿನಲ್ಲಿ ಅವರ ಮಗು ಆಟವಾಡುತ್ತಿತ್ತು. ಈ ವೇಳೆ ಪೊದೆಗಳ ಮರೆಯಿಂದ ಬಂದ ಚಿರತೆಯು ನೇರವಾಗಿ ಮಗುವಿನ ಮೇಲೆ ದಾಳಿ ಮಾಡಲು ಹೊಂಚು ಹಾಕಿತ್ತು. ಇದನ್ನು ಗಮನಿಸಿದ ಮನೆಯಲ್ಲಿದ್ದ ಎರಡು ನಾಯಿಗಳು ತಕ್ಷಣವೇ ಜೋರಾಗಿ ಬೊಗಳಲು ಪ್ರಾರಂಭಿಸಿದವು. ನಾಯಿಗಳ ಬೊಗಳಿಕೆ ಮತ್ತು ಮಗುವಿನ ಕಿರುಚಾಟ ಕೇಳಿ ಚಿರತೆ ಹೆದರಿ ಅಲ್ಲಿಂದ ಕಾಲ್ಕಿತ್ತಿದೆ.
ಕುಟುಂಬಸ್ಥರು ಗದ್ದಲ ಕೇಳಿ ಹೊರಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಚಿರತೆಯೊಂದು ಮನೆಯ ಆವರಣವನ್ನು ಪ್ರವೇಶಿಸಿ ಮಗುವಿನ ಮೇಲೆ ದಾಳಿ ಮಾಡಲು ಯತ್ನಿಸಿದ್ದು ಸ್ಪಷ್ಟವಾಗಿ ಗೋಚರಿಸಿದೆ. ವಾಲ್ಪರೈನಲ್ಲಿ ಕೇವಲ ಕೆಲವೇ ದಿನಗಳ ಹಿಂದೆ ನಾಲ್ಕು ವರ್ಷದ ಬಾಲಕನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದ ಘಟನೆ ಇನ್ನೂ ಹಸಿರಾಗಿರುವಾಗಲೇ ಈ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ವಾಲ್ಪರೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಾಗಿದ್ದು, ಹುಲಿ ದಾಳಿಗೆ ಈಗಾಗಲೇ 10ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇದೀಗ ಚಿರತೆಯೊಂದು ವಸತಿ ಪ್ರದೇಶಕ್ಕೆ ನುಗ್ಗಲು ಯತ್ನಿಸಿರುವುದು ಸ್ಥಳೀಯರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳು ವಾಲ್ಪರೈನಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗುವ ಭೀತಿಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.