ಎನ್.ಆರ್. ಪುರ: ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ಕಾನೂನು ತರಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ಶಾಲೆಗಳಿಗೆ ದಾನ ನೀಡಿರುವ ಜಮೀನು, ಆಸ್ತಿಗಳ ಸಂರಕ್ಷಣೆಗಾಗಿ ಶೀಘ್ರವೇ ಹೊಸ ಮಸೂದೆ ಸಿದ್ಧಪಡಿಸಿ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳ ಆಸ್ತಿಗಳು ಒತ್ತುವರಿಯಾಗಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಅಧಿವೇಶನದಲ್ಲಿ ಮಸೂದೆ ಅಂಗೀಕರಿಸಿ ಶಾಲೆಗಳ ಆಸ್ತಿಗಳನ್ನು ಸಂರಕ್ಷಣೆ ಮಾಡಲಾಗುವುದು. ಫಾರ್ಮ್ ನಂಬರ್ 7 ಇರುವವರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಶಿಕ್ಷಣಕ್ಕೆ ನೀಡಿದ ದಾನಗಳನ್ನು ರಕ್ಷಣೆ ಮಾಡುವ ಬಿಲ್ ಅನ್ನು ಈ ಅಧಿವೇಶನದಲ್ಲಿ ಮಂಡಿಸಲು ಯೋಜಿಸಲಾಗಿತ್ತು. ಇದಕ್ಕೆ ಕಾನೂನಾತ್ಮಕ ಪ್ರಕ್ರಿಯೆ ಇರುವುದರಿಂದ ಇನ್ನೂ ಒಂದು ತಿಂಗಳು ಕಾಲಾವಕಾಶ ಬೇಕಿದೆ. ಅಗತ್ಯ ತಯಾರಿ ಮಾಡಿಕೊಂಡು ಮಸೂದೆ ಸಿದ್ಧಪಡಿಸಿ ನಂತರ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದ್ದಾರೆ.
