ಬೆಂಗಳೂರು: ವಿದ್ಯುತ್ ದರ ಏರಿಕೆ ಇಲ್ಲವೆಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ವಿದ್ಯುತ್ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿಧಾನ ಪರಿಷತ್ ನಲ್ಲಿ ಸಚಿವರು ಮಾಹಿತಿ ನೀಡಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ನ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ವಿದ್ಯುತ್ ಸರಬರಾಜು ಕಂಪನಿಗಳು ನಿಯಮಾನಸಾರ ಕೆಇಆರ್ಸಿಗೆ ವಿದ್ಯುತ್ ದರ ಏರಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿರಬಹುದು. ಕೆಇಆರ್ಸಿ ಗ್ರಾಹಕರ ಅದಾಲತ್ ನಡೆಸಲಿದ್ದು, ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.
ಮಾಜಿ ಸೈನಿಕರ ನೀರಾವರಿ ಪಂಪ್ ಸೆಟ್ ಗಳಿಗೆ ಸಹಾಯಧನ ನೀಡುವ ಬೇಡಿಕೆ ಪರಿಗಣಿಸಲಾಗುವುದು. 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಹಂಚಿಕೆಯಲ್ಲಿ ತಾಂತ್ರಿಕ ವ್ಯತ್ಯಾಸಗಳಿದ್ದರೆ ಅದನ್ನು ಸರಿಪಡಿಸಲಾಗುವುದು. ಪರಿಸರ ಸ್ನೇಹಿ ಹಸಿರು ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರಧಾನ ಮಂತ್ರಿ ಕುಸುಮ್ -ಬಿ ಯೋಜನೆಯಡಿ ವೈಯಕ್ತಿಕ ಕೃಷಿ ಪಂಪ್ಸೆಟ್ ಗಳಿಗೆ ಜಾಲ ಮುಕ್ತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು. ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇಕಡ 50ರಷ್ಟು, ಇತರೆ ವರ್ಗದವರಿಗೆ ಶೇಕಡ 30ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಹೇಳಿದ್ದಾರೆ.