ನವದೆಹಲಿ: ಗೋವಾಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೊಸ ಅತಿಥಿಗಳೊಂದಿಗೆ ದೆಹಲಿಗೆ ತೆರಳಿದ್ದಾರೆ. ಜಾಕ್ ರಸೆಲ್ ಟೆರಿಯರ್ ಎಂಬ ನಾಯಿಮರಿಗಳನ್ನು ತನ್ನಜೊತೆ ಕರೆದೊಯ್ದಿದ್ದಾರೆ.
ಆಗಸ್ಟ್ 2ರಂದು ಗೋವಾಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ, ಮಪುಸಾ ಪಟ್ಟಣದ ಡಾಗ್ ಕೆನಲ್ ಗೆ ಭೇಟಿ ನೀಡಿದ್ದರು. ಈ ವೇಳೆ ಸ್ಟಾನ್ಲಿ ಬ್ರಗಾಂಕಾ ಹಾಗೂ ಶಿವಾನಿ ಪಿತ್ರೆ ದಂಪತಿ ರಾಹುಲ್ ಗಾಂಧಿಯವರಿಗೆ ಜಾಕ್ ರಸೆಲ್ ಟೆರಿಯರ್ ಒಂದು ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದರು.
ಈ ವೇಳೆ ರಾಹುಲ್ ಗಾಂಧಿ ಎರಡು ನಾಯಿಮರಿಗಳನ್ನು ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಎರಡು ಮರಿಗಳನ್ನು ಕಳುಹಿಸಿಕೊಡುವುದಾಗಿ ಶಿವಾನಿ ಪಿತ್ರೆ ದಂಪತಿ ತಿಳಿಸಿದ್ದಾರೆ.
ಈ ಹಿಂದೆಯೇ ರಾಹುಲ್ ಗಾಂಧಿ ಗೋವಾದ ಡಾಗ್ ಕೆನಲ್ ಬಗ್ಗೆ ತಿಳಿದುಕೊಂಡಿದ್ದರಂತೆ. ತಮ್ಮ ಪ್ರತಿನಿಧಿಯನ್ನೂ ಕಳುಹಿಸಿದ್ದರಂತೆ. ಆದರೆ ಶಿವಾನಿ ಪಿತ್ರೆ ದಂಪತಿ ರಾಹುಲ್ ಗಾಂಧಿಯವರನ್ನು ಖುದ್ದು ನೋಡಬೇಕು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಆಗಸ್ಟ್ 3ರಂದು ಬೆಳಿಗ್ಗೆ ಉತ್ತರ ಗೋವಾದ ಮೋಪಾದಲ್ಲಿರುವ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಮಾಪುಸಾ ಪಟ್ಟಣದಲ್ಲಿರುವ ಡಾಗ್ ಕೆನಲ್ ಗೆ ಭೇಟಿ ನೀಡಿದ್ದಾರೆ.
ರಾಹುಲ್ ಗಾಂಧಿಯನ್ನು ಕಂಡು ದಂಪತಿಗಳು ಅಚ್ಚರಿಯಾಗಿದ್ದಾರೆ. ರಾಷ್ಟ್ರೀಯ ಪಕ್ಷದ ನಾಯಕನೊಬ್ಬ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡಿದ್ದು ನೋಡಿ ಶಿವಾನಿ ದಂಪತಿ ಖುಷಿಯಾಗಿದ್ದಾರೆ. ಕೆಲ ಕಾಲ ಡಾಗ್ ಕೆನಲ್ ನಲ್ಲಿ ಕಳೆದ ರಾಹುಲ್ ಬಳಿಕ ದೆಹಲಿಯತ್ತ ಪ್ರಯಾಣಿಸಿದ್ದಾರೆ. ಈ ವೇಳೆ ಜಾಕ್ ರಸೆಲ್ ಟೆರಿಯರ್ ನಾಯಿಮರಿಯನ್ನು ತಮ್ಮ ಜೊತೆ ಕರೆದೊಯ್ದಿದ್ದಾರೆ.