ನವದೆಹಲಿ: ಅಧಿಕ ಪಿಂಚಣಿ ಆಯ್ಕೆ ಮಾಡಿಕೊಳ್ಳುವವರ ವೇತನ ಮಾಹಿತಿ ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ನೀಡಲಾಗಿದ್ದ ಗಡುವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO) ಮೇ 31 ರವರೆಗೆ ವಿಸ್ತರಿಸಿದೆ.
ವಿವರ ಸಲ್ಲಿಸಲು ಈ ಹಿಂದೆ 2023ರ ಡಿಸೆಂಬರ್ 31ಕ್ಕೆ ಗಡುವು ಮುಕ್ತಾಯವಾಗಿತ್ತು. ಎಲ್ಲಾ ಚಂದಾದಾರರಿಗೆ ಹೆಚ್ಚಿನ ಕೊಡುಗೆಗಳ ಮೇಲೆ ಪಿಂಚಣಿ ಆಯ್ಕೆ, ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಇಪಿಎಫ್ಒ ಆನ್ಲೈನ್ ಸೌಲಭ್ಯ ಕಲ್ಪಿಸಿತ್ತು. ನಂತರ 2022ರ ನವೆಂಬರ್ 4ರ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಅರ್ಹ ಪಿಂಚಣಿದಾರರು ಇಪಿಎಫ್ಒ ಸದಸ್ಯರಿಗೆ ಅಧಿಕ ಪಿಂಚಣಿ ಆಯ್ಕೆ ನೀಡಲಾಗಿತ್ತು.
ಇದೀಗ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಬುಧವಾರ ಉದ್ಯೋಗದಾತರಿಗೆ ಹೆಚ್ಚಿನ ಪಿಂಚಣಿಗಾಗಿ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಸಮಯವನ್ನು ಐದು ತಿಂಗಳವರೆಗೆ ವಿಸ್ತರಿಸಿದೆ. ವೇತನ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಉದ್ಯೋಗದಾತರಿಗೆ ಸಮಯವನ್ನು 31 ಮೇ, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆಯ್ಕೆ/ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ 3.6 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಇನ್ನೂ ಪ್ರಕ್ರಿಯೆಗಾಗಿ ಉದ್ಯೋಗದಾತರ ಬಳಿ ಬಾಕಿ ಉಳಿದಿವೆ ಎಂದು ಸಚಿವಾಲಯ ತಿಳಿಸಿದೆ.