ಬೆಂಗಳೂರು: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ. ಸಂಗಮೇಶ್ ಅವರು ವಿಷಯ ಪ್ರಸ್ತಾಪಿಸಿ ಭದ್ರಾವತಿ ವಿಐಎಸ್ಎಲ್ ಉಕ್ಕಿನ ಕಾರ್ಖಾನೆ ಮುಚ್ಚದಂತೆ ಸದನದಲ್ಲಿ ನಿರ್ಣಯ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ದನಿಗೂಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ವಿಐಎಸ್ಎಲ್ ದಕ್ಷಿಣ ಭಾರತದ ಮೊದಲ ಉಕ್ಕು ಕಾರ್ಖಾನೆಯಾಗಿದ್ದು, ಇಲ್ಲಿ ಉತ್ಪಾದನೆ ಆಗುವ ಉಕ್ಕು ಗುಣಮಟ್ಟಕ್ಕೆ ಹೆಸರಾಗಿದೆ. ಕುದುರೆಮುಖ ಗಣಿಯಿಂದ ಅದಿರು ಪಡೆದು ಉತ್ಕೃಷ್ಟ ಉಕ್ಕು ಉತ್ಪಾದಿಸಲಾಗುತ್ತಿತ್ತು. ಕುದುರೆಮುಖ ಗಣಿ ಆದಿರು ಸ್ಥಗಿತಗೊಂಡ ನಂತರ ವಿಐಎಸ್ಎಲ್ ಉತ್ಪಾದನೆ ಕುಸಿತವಾಯಿತು. ಕೇಂದ್ರ ಸರ್ಕಾರ ಇದನ್ನು ಖಾಸಗಿಕರಣ ಮಾಡಲು ಮುಂದಾಗಿದ್ದು, ಯಾವ ಕಂಪನಿಯೂ ಮುಂದೆ ಬಾರದ ಕಾರಣ ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಯಾವುದೇ ಕಾರಣಕ್ಕೂ ಕಾರ್ಖಾನೆ ಮುಖ್ಯದಂತೆ ಹೇಳಿದ್ದೇವೆ. ಕಾರ್ಖಾನೆ ಮುಂದುವರಿಸುವ ಮೂಲಕ ನೌಕರರ ಹಿತ ಕಾಯುವ ಕೆಲಸ ಮಾಡುತ್ತೇವೆ. ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.