ಶಿವಮೊಗ್ಗ: ಹುಲಿಕಲ್ ಘಾಟಿ(ಬಾಳೇರೆ) ಘಾಟಿಯಲ್ಲಿ ಮಣ್ಣು ಕುಸಿತವಾಗಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ- ಕುಂದಾಪುರ ನಡುವಿನ ರಾಜ್ಯ ಹೆದ್ದಾರಿ 52 ರಲ್ಲಿ ತಾತ್ಕಾಲಿಕವಾಗಿ ಭಾರಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.
ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಮಣ್ಣು ಕುಸಿತವಾಗಿದೆ. ಘಾಟಿಯ ಸರಪಳಿ 42.10 ರಿಂದ 42.20 ರಲ್ಲಿನ ಹೇರ್ ಪಿನ್ ತಿರುವಿನ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಮಳೆಯಿಂದಾಗಿ ಮೇ ಅಂತ್ಯದಲ್ಲಿ ಮಣ್ಣು ಕುಸಿತವಾಗಿತ್ತು. ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ನಡೆಸಲಾಗಿದೆ. ಮಳೆ ಚುರುಕಾಗಿರುವುದರಿಂದ ಮತ್ತೆ ಮಣ್ಣು ಕುಸಿಯುವ ಸಂಭವ ಇದೆ.
ಸುರಕ್ಷತೆಯ ದೃಷ್ಟಿಯಿಂದ ಮಾಸ್ತಿಕಟ್ಟೆಯಿಂದ ಹೊಸಂಗಡಿಯವರಿಗೆ ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕವಾಗಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಲೋಕೋಪಯೋಗಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಭಾರಿ ವಾಹನಗಳು ಬದಲಿಯಾಗಿ ತೀರ್ಥಹಳ್ಳಿ -ರಾವೆ ಕಾನುಗೋಡು- ಸಿದ್ದಾಪುರ ಮಾರ್ಗವಾಗಿ ಕುಂದಾಪುರ ತೀರ್ಥಹಳ್ಳಿ -ಯಡೂರು –ಮಾಸ್ತಿಕಟ್ಟೆ- ನಗರ -ಕೊಲ್ಲೂರು ಮಾರ್ಗವಾಗಿ ಕುಂದಾಪುರ ಹಾಗೂ ಶಿವಮೊಗ್ಗ- ಹೊನ್ನಾವರ -ಭಟ್ಕಳ -ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಬಹುದು ಎಂದು ಹೇಳಲಾಗಿದೆ.