ಚಾಮರಾಜನಗರ: ಮಹಿಳಾ ಪಿಎಸ್ ಐ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ.
ಕೊಳ್ಳೆಗಾಲ ಠಾಣೆ ಪಿಎಸ್ಐ ವರ್ಷಾ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ದುಷ್ಯಂತ್ ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ಪದೇ ಪದೇ ಠಾಣೆಗೆ ಕರೆಸುವುದು, ಎನ್ ಕೌಂಟರ್ ಮಾಡುವುದಾಗಿ ಧಮ್ಕಿ ಹಾಕುವುದು ಮಾಡುತ್ತಿದ್ದರು. ಅಲ್ಲದೇ ನಿನ್ನೆ ದುಷ್ಯಂತ್ ಮನೆಗೆ ಹೋಗಿದ್ದ ಪಿಎಸ್ಐ ವರ್ಷಾ, ದುಷ್ಯಂತ್ ತಾಯಿ ರಾಧಿಕಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಂತೆ. ಹಣ ನೀಡದಿದ್ದರೆ ರೌಡಿಶೀಟ್ ಓಪನ್ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ.
ದುಷ್ಯಂತ್ ಈ ಹಿಂದೆ ಯುವಕರ ಜೊತೆ ಗಲಾಟೆ ಮಾಡಿಕೊಂಡಿದ್ದ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಮಹಿಳಾ ಪಿಎಸ್ಐ ಪದೇ ಪದೇ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತು ದುಷ್ಯಂತ್, ಮದ್ಯದ ಜೊತೆ ಡೊಮ್ಯಾಕ್ಸ್ ಬೆರೆಸಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿದ್ದ ದುಷ್ಯಂತ್ ನನ್ನು ಕೊಳ್ಳೆಗಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ದುಷ್ಯಂತ್ ಬಾರ್ ನಲ್ಲಿ ಕಿರಿಕ್ ಮಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಪಿಎಸ್ಐ ವರ್ಷಾ ಹರಿಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕೊಳ್ಳೆಗಾಲ ಠಾಣೆಯಲ್ಲಿ ಪಿಎಸ್ಐ ವಿರುದ್ಧ ದೂರು ದಾಖಲಾಗಿದೆ.