ಶುಭ ಸುದ್ದಿ: ಚಾಲಕರು, ನಿರ್ವಾಹಕರು ಸೇರಿ 9 ಸಾವಿರ ಹುದ್ದೆಗಳಿಗೆ ನೇಮಕಾತಿ: ಸಚಿವ ರಾಮಲಿಂಗಾರೆಡ್ಡಿ

ಮಡಿಕೇರಿ: ನಗರದಲ್ಲಿ ಕೆಎಸ್‍ಆರ್‍ಟಿಸಿ ವಿಭಾಗೀಯ ಘಟಕ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ತಿಳಿಸಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗ ವತಿಯಿಂದ ಶನಿವಾರಸಂತೆಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈಗಾಗಲೇ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಘಟಕವಿದೆ. ಜೊತೆಗೆ ಕುಶಾಲನಗರದಲ್ಲಿ ನೂತನ ಬಸ್ ಘಟಕ ನಿರ್ಮಾಣವಾಗುತ್ತಿದೆ. ಈ ಎರಡು ಘಟಕಕ್ಕೆ ವಿಭಾಗೀಯ ಕಚೇರಿ ಆರಂಭಿಸಲು ಕಷ್ಟಸಾಧ್ಯ. ಆದ್ದರಿಂದ ಹತ್ತಿರದ ರಾಮನಾಥಪುರ ಇತರೆ ಒಟ್ಟು 4 ಘಟಕಗಳನ್ನು ಒಳಗೊಂಡು ಒಂದು ವಿಭಾಗೀಯ ಕಚೇರಿ ಆರಂಭಿಸಬೇಕು. ಆ ನಿಟ್ಟಿನಲ್ಲಿ ಆದ್ಯತೆ ಮೇಲೆ ಪ್ರಯತ್ನಿಸಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು.

ಸರ್ಕಾರದ ಶಕ್ತಿ ಯೋಜನೆ ನಂತರ ಕರ್ನಾಟಕ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮತ್ತು ಸುಧಾರಣೆಯಾಗಿದೆ. ಪ್ರತಿನಿತ್ಯ ಸಾವಿರಾರು ಮಹಿಳೆಯರು ಬಸ್‍ನಲ್ಲಿ ಸಂಚರಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿದೆ. ಆದ್ದರಿಂದ 4500 ಹೊಸ ಬಸ್‍ಗಳನ್ನು ಸಹ ಖರೀದಿಸಲಾಗಿದೆ. ಜೊತೆಗೆ ಚಾಲಕ, ನಿರ್ವಾಹಕ ಸೇರಿದಂತೆ 9 ಸಾವಿರ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್, 12 ರಂದು ಬೆಂಗಳೂರಿನಲ್ಲಿ ಹೊಸ ಬಸ್‍ಗಳ ಸಂಚಾರ ಸೇರಿದಂತೆ ಸಾರಿಗೆ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.

ಜಿಲ್ಲೆಯ ಕೊಡ್ಲಿಪೇಟೆಯಲ್ಲೂ ಸಹ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಹಾಗೆಯೇ ಖಾಸಗಿ ಬಸ್ ಮಾಲೀಕರ ಸಮಸ್ಯೆಯನ್ನು ಸಹ ಕೇಳಲಾಗಿದೆ. ಒಟ್ಟಾರೆ ಜಿಲ್ಲೆಯ ಜನರ ಸುಗಮ ಸಾರಿಗೆ ಸಂಚಾರಕ್ಕೆ ಎಲ್ಲಾ ರೀತಿಯ ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ ಹೊಸ ಬಸ್ ಮಾರ್ಗಕ್ಕೂ ಸಹ ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವರು ನುಡಿದರು.

ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಕೆಎಸ್‍ಆರ್‍ಟಿಸಿ ವಿಭಾಗೀಯ ಘಟಕ ಆರಂಭವಾಗಬೇಕಿದೆ. ಆ ನಿಟ್ಟಿನಲ್ಲಿ ಮಾನ್ಯ ಸಚಿವರು ಪ್ರತ್ಯೇಕ ವಿಭಾಗೀಯ ಕಚೇರಿ ಆರಂಭಕ್ಕೆ ಅವಕಾಶ ಮಾಡಬೇಕು. ಪ್ರತ್ಯೇಕ ವಿಭಾಗೀಯ ಘಟಕ ಆರಂಭಿಸುವುದರ ಜೊತೆಗೆ ಬಸ್‍ಗಳಿಗೆ ಕೆಎ12 ನೋಂದಣಿ ಆಗಬೇಕು ಎಂದು ಶಾಸಕರು ಕೋರಿದರು.

ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ ಕೆಎಸ್‍ಆರ್‍ಟಿಸಿಯು ಇಡೀ ಏಷ್ಯದಲ್ಲಿಯೇ ಮಾದರಿ ಸಾರಿಗೆ ಸಂಸ್ಥೆಯಾಗಿದ್ದು, ಹಲವರಿಗೆ ಉದ್ಯೋಗ ನೀಡಿದೆ. ಜೊತೆಗೆ ಹೆಚ್ಚು ಲಾಭವನ್ನು ಸಹ ಹೊಂದಿದೆ ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read