ದೊಡ್ದಬಳ್ಳಾಪುರ: 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಟೈರ್ ಏಕಾಏಕಿ ಸ್ಫೋಟಗೊಂಡು ತಡೆಗೋಡೆಗೆ ಗುದ್ದಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ ನಡೆದಿದೆ.
ಚಲಿಸುತ್ತಿದ್ದ ಬಸ್ ನ ಟೈರ್ ಏಕಾಏಕಿ ಸ್ಫೋಟಗೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ ತಡೆಗೋಡೆಗೆ ಗುದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು, ಚಾಲಕ, ಕಂಡಕ್ಟರ್ ಅಪಾಯದಿಂದ ಪಾರಾಗಿದ್ದಾರೆ.
ಮೆಣಸಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 648ರ ಬಳಿ ಘಟನೆ ನಡೆದಿದೆ. ಸೂಲಿಕುಂಟೆ-ದೊಡ್ದಬಳ್ಳಾಪುರ ಮಾರ್ಗದ ಬಸ್ ದೊಡ್ಡಬಳ್ಳಾಪುರ ನಗರಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಬಸ್ ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಚಾಲಕ ಮುನಿಶ್ಯಾಮಪ್ಪ, ಬಸ್ ನ್ನು ತಡೆಗೋಡೆ ಕಡೆಗೆ ತಿರುಗಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.