BIG NEWS: ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐಗೆ ವಹಿಸಿ ಸಿಎಂ ರಾಜೀನಾಮೆ ನೀಡಲಿ; ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ

ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಭ್ರಷ್ಟಾಚಾರ ಆರೋಪದ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರ ಸಿಬಿಐ ತನಿಖೆಗೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ 40% ಕಮಿಶನ್‌ ಆರೋಪ ಮಾಡಿದ್ದಾರೆ. ಕಮಿಶನ್‌ ಕೊಡುವವರಿಗೆ ಬಿಲ್‌ ಪಾವತಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸರ್ಕಾರ ಬಂದ ಆರಂಭದಿಂದಲೇ ಕಮಿಶನ್‌ ದಂಧೆ ಹಾಗೂ ಲೂಟಿ ನಡೆಯುತ್ತಿದೆ ಎಂದು ನಾವು ಕೂಡ ತಿಳಿಸಿದ್ದೆವು. ಲಂಚ ಕೊಡುತ್ತಿರುವವರ ಸಂಘದವರೇ ಹೇಳಿರುವುದರಿಂದ ಇದು ಲೂಟಿಕೋರ ಸರ್ಕಾರ, 75 ಪರ್ಸೆಂಟ್‌ ಸರ್ಕಾರ ಎಂಬುದು ಕಂಡುಬಂದಿದೆ ಪ್ರಕರಣವನ್ನು ಸಿಬಿಐಗೆ ವಹಿಸಲಿ. ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿದರೆ ಕೂಡಲೇ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ. ಇವರು ಪ್ರಾಮಾಣಿಕರೇ ಆಗಿದ್ದರೆ, ನಯಾ ಪೈಸೆಯೂ ಭ್ರಷ್ಟಾಚಾರ ಆಗಿಲ್ಲ ಎನ್ನುವವರಾದರೆ ಸಿಬಿಐ ತನಿಖೆಗೆ ನೀಡಲಿ ಎಂದು ಒತ್ತಾಯಿಸಿದರು.

ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗಲೂ ಕಾಂಗ್ರೆಸ್ ಬೆಂಬಲಿಗರ ಮನೆಗಳಲ್ಲಿ ಎರಡು ಕಡೆ ಐವತ್ತು- ಐವತ್ತು ಕೋಟಿ ಹಣ ಸಿಕ್ಕಿದೆ. ಇದು ಲೂಟಿ ಹೊಡೆದ ಹಣ ಎಂಬುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು ಎಂದು ಪ್ರಶ್ನಿಸಿದರು.

ಈ ಹಿಂದೆ ಐದು ರಾಜ್ಯಗಳ ಚುನಾವಣೆಗಾಗಿ ಲೂಟಿ ನಡೆಯಿತು. ಈಗ ಮುಂಬರುವ ಲೋಕಸಭಾ ಚುನಾವಣೆಗೆ ಲೂಟಿ ನಡೆಯುತ್ತಿದೆ. ಎಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮುಂದೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಇದೇ ಕೆಂಪಣ್ಣ ನಮ್ಮ ಸರಕಾರದ ಅವಧಿಯಲ್ಲಿ ಆರೋಪ ಮಾಡಿದಾಗ ಸಿಎಂ ಸಿದ್ದರಾಮಯ್ಯನವರು ಪೇಸಿಎಂ ಎಂಬ ಪೋಸ್ಟರ್‌ ಅಂಟಿಸಿದ್ದರು. ಈಗ ಯಾರ ಮುಖದ ಮೇಲೆ ಯಾವ ಪೋಸ್ಟರ್‌ ಅಂಟಿಸಿಕೊಳ್ಳುತ್ತಾರೆ? ಪೇ ಸಿದ್ದರಾಮಯ್ಯ, ಎಟಿಎಂ ಸಿದ್ದರಾಮಯ್ಯ ಎಂದು ಅಂಟಿಸಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.

ಮಾಡುವುದು ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವ ಸ್ಥಿತಿ ಸಿಎಂ ಸಿದ್ದರಾಮಯ್ಯನವರದ್ದು. ಅಂದು ರೋಷಾವೇಶದಿಂದ ಮಾತನಾಡುತ್ತಿದ್ದ ಅವರು ಈಗ ಎರಡು ನಾಲಿಗೆಯನ್ನು ತೋರಿಸಿದ್ದಾರೆ. ಲೋಕಸಭಾ ಚುನಾವಣೆಗಾಗಿ ಲೂಟಿ ಮಾಡುತ್ತಿದ್ದು, ಎಂಟೇ ತಿಂಗಳಲ್ಲಿ ಸರ್ಕಾರಕ್ಕೆ ಭ್ರಷ್ಟಾಚಾರ ಆರೋಪ ಬಂದಿದೆ. ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read