BIG NEWS: ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಉಪ ಸಮಿತಿ ನಿರ್ಧಾರ

ಬೆಂಗಳೂರು: ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಗ್ರಾಮಗಳ ಜನರಿಗೆ ಹಾನಿಯಾಗದಂತೆ ವರದಿಯನ್ನು ರಾಜ್ಯದ ಪರವಾಗಿ ತಿರಸ್ಕರಿಸಬೇಕು ಎಂಬುದು ಸೇರದಂತೆ ಮೂರು ರೀತಿಯ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಕಸ್ತೂರಿರಂಗನ್ ವರದಿಯಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ಅನ್ಯಾಯವಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಹೀಗಾಗಿ ರಾಜ್ಯದಿಂದ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕು. ಇಲ್ಲದಿದ್ದಲ್ಲಿ ರಾಜ್ಯ ವ್ಯಾಪ್ತಿಯ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವಂತೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಅಧಿಸೂಚನೆ ಬದಲಿಗೆ ಈಗಾಗಲೇ ನಿಗದಿಪಡಿಸಿದ 16,114 ಚದರ ಕಿ. ಮೀ. ಭೂಮಿಯನ್ನು ಮಾತ್ರ ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕು ಎಂದು ನಿರ್ಧರಿಸಲಾಗಿದೆ.

ಪರಿಸರ ಸೂಕ್ಷ್ಮ ವಲಯದಲ್ಲಿನ ಗ್ರಾಮಗಳಿಗೆ ವಿಶೇಷ ಪ್ಯಾಕೇಜ್ ಗಾಗಿ ಬೇಡಿಕೆ ಸಲ್ಲಿಸುವಂತೆ ಕೋರಲಾಗುವುದು. ಪರಿಸರ ಸೂಕ್ಷ್ಮ ವಲಯ ಗುರುತಿಸುವ ಸಂಬಂಧ ಈಗಾಗಲೇ ನಿಗದಿ ಮಾಡಲಾದ 16,114 ಚದರ ಕಿ.ಮೀ. ಪ್ರದೇಶವನ್ನು ಮರು ಸರ್ವೇ ನಡೆಸಿ ಆ ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್ ವರದಿಯನ್ನು ಸಮ್ಮತಿಸಬಹುದು ಎಂದು ಚರ್ಚಿಸಲಾಗಿದೆ.

ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ತನ್ನ ನಿಲುವನ್ನು ಕೇಂದ್ರಕ್ಕೆ ಹಲವು ಬಾರಿ ಸ್ಪಷ್ಟಪಡಿಸಿದೆ. ಮತ್ತೊಮ್ಮೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಸಮಾಲೋಚನೆ ನಡೆಸಿ ಕೇಂದ್ರಕ್ಕೆ ಅಭಿಪ್ರಾಯ ತಿಳಿಸಲಾಗುವುದು.

ಸಚಿವರಾದ ಕೆ.ಜೆ ಜಾರ್ಜ್,  ದಿನೇಶ್ ಗುಂಡೂರಾವ್, ಮಂಕಾಳ್ ವೈದ್ಯ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read