BIG NEWS: ಬಲೂಚಿಸ್ತಾನದ ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತೆಯಾಗಿ ಕಾಶಿಶ್ ಚೌಧರಿ ನೇಮಕ

ಬಲೂಚಿಸ್ತಾನದಂತಹ ಹಿಂದುಳಿದ ಪ್ರದೇಶದಿಂದ ಬಂದ ಕೇವಲ 25 ವರ್ಷದ ಯುವತಿ ಹಿಂದೂ ಸಮುದಾಯದ ಕಾಶಿಶ್ ಚೌಧರಿಯವರು ಸಹಾಯಕ ಆಯುಕ್ತರಾಗಿ ನೇಮಕಗೊಂಡು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದು, ಯುವತಿಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಚಾಗೈ ಜಿಲ್ಲೆಯ ನೊಶ್ಕಿ ಎಂಬ ದೂರದ ಪಟ್ಟಣದ ನಿವಾಸಿಯಾದ ಕಾಶಿಶ್, ಬಲೂಚಿಸ್ತಾನ್ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗುವ ಮೂಲಕ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಸೋಮವಾರದಂದು, ಕಾಶಿಶ್ ಅವರು ತಮ್ಮ ತಂದೆ ಗಿರ್ಧಾರ ಲಾಲ್ ಅವರೊಂದಿಗೆ ಕ್ವೆಟ್ಟಾದಲ್ಲಿ ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿಯವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಶ್ರಮಿಸುವುದಾಗಿ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು ಎಂದು ವರದಿಯಾಗಿದೆ.

ತಮ್ಮ ಮಗಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ತಂದೆ ಗಿರ್ಧಾರ ಲಾಲ್, ಇದು “ಅತ್ಯಂತ ಹೆಮ್ಮೆಯ ವಿಷಯ” ಎಂದು ಹೇಳಿದ್ದಾರೆ. ಕಾಶಿಶ್ ಅವರು ಯಾವಾಗಲೂ ಮಹಿಳೆಯರಿಗಾಗಿ ಕಲಿಯಲು ಮತ್ತು ಏನನ್ನಾದರೂ ಮಾಡಲು ಕನಸು ಕಂಡಿದ್ದರು ಎಂದು ಅವರು ಸ್ಮರಿಸಿಕೊಂಡರು.

ಕಾಶಿಶ್ ಅವರ ಯಶಸ್ಸಿನ ಗುಟ್ಟು ಏನು ?

ಸಮಾ ಟಿವಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಕಾಶಿಶ್, ಈ ಯಶಸ್ಸನ್ನು ಸಾಧಿಸಲು ಮೂರು ವರ್ಷಗಳ ಕಠಿಣ ಪರಿಶ್ರಮ ಮತ್ತು ಶಿಸ್ತು ಬೇಕಾಯಿತು ಎಂದು ಹೇಳಿದ್ದಾರೆ. ಅವರು ಪ್ರತಿದಿನ ಎಂಟು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. “ಶಿಸ್ತು, ಕಠಿಣ ಪರಿಶ್ರಮ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಬಯಕೆ ಈ ಪಯಣದುದ್ದಕ್ಕೂ ನನ್ನನ್ನು ಮುನ್ನಡೆಸಿದವು” ಎಂದು ಅವರು ಹೇಳಿದ್ದಾರೆ.

ಹೆಚ್ಚುತ್ತಿರುವ ಸಾಧಕರ ಸಾಲಿನಲ್ಲಿ ಕಾಶಿಶ್ !

ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸುತ್ತಿರುವ ಪಾಕಿಸ್ತಾನದ ಹಿಂದೂ ಸಮುದಾಯದ ಸಾಧಕರ ಪಟ್ಟಿಗೆ ಕಾಶಿಶ್ ಚೌಧರಿ ಹೊಸ ಸೇರ್ಪಡೆಯಾಗಿದ್ದಾರೆ. ಈ ಹಿಂದೆ, 2022 ರಲ್ಲಿ ಮನೇಶ್ ರೋಪೆಟಾ ಕರಾಚಿಯ ಮೊದಲ ಹಿಂದೂ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡರು ಮತ್ತು ಅವರು ಇನ್ನೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಸಿಂಧ್ ಲೋಕಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುಷ್ಪಾ ಕುಮಾರಿ ಕೋಹ್ಲಿ ಕರಾಚಿ ಪೊಲೀಸರಲ್ಲಿ ಉಪ-ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮನ್ ಪವನ್ ಬೋದಾನಿ ಅವರು 2019 ರಲ್ಲಿ ಸಿಂಧ್ ಪ್ರಾಂತ್ಯದ ಶಹದಾದ್‌ಕೋಟ್‌ನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ನಂತರ ಹೈದರಾಬಾದ್‌ನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನದ ಹೆಚ್ಚಿನ ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ.

ಕಾಶಿಶ್ ಚೌಧರಿ ಅವರ ಈ ಸಾಧನೆ ಅನೇಕರಿಗೆ ಪ್ರೇರಣೆಯಾಗಿದ್ದು, ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಯಾವುದೇ ಗುರಿಯನ್ನು ಮುಟ್ಟಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read