ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2023 -24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ರದ್ದುಪಡಿಸಿ ಸಹಕಾರ ಸಂಘಗಳ ಉಪನಿಬಂಧಕರ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಆಕ್ಷೇಪಿಸಿದ್ದು, ಹೈಕೋರ್ಟ್ ಮೆಟ್ಟಿಲೇರಿದೆ.
ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಸರ್ವ ಸದಸ್ಯರ ಸಭೆ ರದ್ದುಪಡಿಸಿ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಖರ್ಚು ವೆಚ್ಚಗಳ ಕುರಿತು ವಿಚಾರಣೆ ನಡೆಸುವ ಸಹಕಾರ ಸಂಘಗಳ ಉಪನಿಬಂಧಕರ ಕ್ರಮವನ್ನು ಆಕ್ಷೇಪಿಸಲಾಗಿದೆ.
ಬೆಂಗಳೂರು ನಗರ ವಲಯ 2ರ ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಸಂಘಗಳ ನೋಂದಣಿ ಅಧಿಕಾರಿ ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಅರ್ಜಿ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು. ಕಲಾಪ ಮುಕ್ತಾಯದ ವೇಳೆ ಅರ್ಜಿದಾರ ಮಹೇಶ್ ಜೋಶಿ ಅವರ ಪರ ಹಿರಿಯ ವಕೀಲ ಎಂ. ಅರುಣ್ ಶಾಮ್ ಹಾಜರಾಗಿದ್ದರು.
ಸಾಯತ್ತ ಮತ್ತು ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಅಧಿಕಾರ ವ್ಯಾಪ್ತಿ ಮೀರಿ ಸಹಕಾರ ಸಂಘಗಳ ಉಪನಿಬಂಧಕರು ಕ್ರಮ ಕೈಗೊಂಡಿದ್ದಾರೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕಿದೆ ಎಂದು ಮನವಿ ಮಾಡಿದ್ದಾರೆ. ಸೋಮವಾರಕ್ಕೆ ಅರ್ಜಿ ವಿಚಾರಣೆ ಪರಿಗಣಿಸುವುದಾಗಿ ನ್ಯಾಯ ಪೀಠ ಹೇಳಿದೆ.