ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಸಾಹಿತ್ಯ ಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಐವರು ಹಿರಿಯ ಸಾಹಿತಿಗಳಿಗೆ ವಾರ್ಷಿಕ ಗೌರವ ಪ್ರಶಸ್ತಿ, 10 ಮಂದಿಗೆ ಸಾಹಿತ್ಯ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ.ಸಿ. ವೀರಣ್ಣ, ಡಾ. ಶ್ರೀರಾಮ ಇಟ್ಟಣ್ಣವರ, ಜಾಣಗೆರೆ ವೆಂಕಟರಾಮಯ್ಯ, ಎ.ಎಂ. ಮದರಿ, ಡಾ. ಸಬಿಹಾ ಭೂಮಿ ಗೌಡ ಅವರಿಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ 50,000 ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಒಳಗೊಂಡಿರುತ್ತದೆ.
ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆ ಪರಿಗಣಿಸಿ 50 ರಿಂದ 60ರ ವಯೋಮಾನದ 10 ಮಂದಿಗೆ ಸಾಹಿತಿಗಳಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಒಳಗೊಂಡಿದೆ.
ಡಾ. ಎಂ.ಎಸ್. ಶೇಖರ್, ಜಿ.ಎನ್. ಮೋಹನ್, ಟಿ.ಎಸ್. ವಿವೇಕಾನಂದ, ಜಯಶ್ರೀ ಕಂಬಾರ ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ, ಬಾಲಗುರುಮೂರ್ತಿ, ಶಿವಗಂಗಾ ರುಮ್ಮಾ, ರೀಟಾ ರೀನಿ, ಕಲೀಮ್ ಉಲ್ಲಾ, ವೆಂಕಟಗಿರಿ ದಳವಾಯಿ ಅವರಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಲಾಗಿದೆ.
ಮಾರ್ಚ್ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.