ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ನಟಿ ಕಂಗನಾ ರಣಾವತ್ ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ಈ ಟ್ವೀಟ್ ಅನ್ನು ಕಂಗನಾ ರಣಾವತ್ ಅವರು ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ಹಾಸ್ಯ ಕಲಾವಿದ ಅಭಿಜಿತ್ ಗಂಗೂಲಿ, ಕಂಗನಾ ರಣಾವತ್ ಅವರಿಗೆ ಟಾಂಗ್ ನೀಡಿದ್ದಾರೆ.
ಆ್ಯಪಲ್ ಕಂಪನಿಯು ಭಾರತದಲ್ಲಿ ಉತ್ಪಾದನೆ ಮಾಡುವ ಬಗ್ಗೆ ಟ್ರಂಪ್ ಹೇಳಿದ್ದ ಹೇಳಿಕೆ ಬಗ್ಗೆ ಕಂಗನಾ ರಣಾವತ್ ಟ್ವೀಟ್ ಮಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಆ ಟ್ವೀಟ್ ಅನ್ನು ಕಂಗನಾ ರಣಾವತ್ ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ಕಂಗನಾ ರಣಾವತ್ ಅವರು ಪ್ರತಿಕ್ರಿಯೆ ನೀಡಿದ್ದು, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕರೆ ಮಾಡಿ ಟ್ವೀಟ್ ಡಿಲೀಟ್ ಮಾಡುವಂತೆ ಸೂಚಿಸಿದರು. ಅವರ ಸೂಚನೆಯಂತೆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಈ ಘಟನೆಗೆ ಹಾಸ್ಯ ಕಲಾವಿದ ಅಭಿಜಿತ್ ಗಂಗೂಲಿ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿಗೆ ನಿಧಾನವಾಗಿ ಅರ್ಥವಾಗುತ್ತಿದೆ, ಬಾಲಿವುಡ್‌ನಲ್ಲಿ ಅವರೊಂದಿಗೆ ಯಾರೂ ಏಕೆ ಬೆರೆಯುವುದಿಲ್ಲ ಎಂದು” ಎಂಬುದಾಗಿ ಅಭಿಜಿತ್ ಗಂಗೂಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಂಗನಾ ರಣಾವತ್ ಅವರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಟ್ರಂಪ್ ಬಗ್ಗೆ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿ ನಾಯಕರ ಸೂಚನೆಯಂತೆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಇದರಿಂದಾಗಿ ಕಂಗನಾ ರಣಾವತ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.