ಕಲಬುರಗಿ: ಎಷ್ಟೇ ಪ್ರಯತ್ನ ಪಟ್ಟರೂ ಸೂಕ್ತ ಕೆಲಸ ಸಿಗದ ಕಾರಣ ಹತಾಶೆಗೊಂಡು ಮನನೊಂದಿದ್ದ ವ್ಯಕ್ತಿಯೊಬ್ಬರು ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರದ ಕೊರಿಕೋಟಾದಲ್ಲಿ ನಡೆದಿದೆ.
ಮಹದೇವ ನಗರದ ನಿವಾಸಿ ಶಿವರಾಜ್ ರೇವಣಸಿದ್ದಪ್ಪ (45) ಆತ್ಮಹತ್ಯೆಗೆ ಶರನಾದವರು. ಕುರಿಕೋಟಾ ಸೇತುವೆಯಿಂದ ಬೆಣ್ಣೆತೊರಾ ಹಿನ್ನೀರಿಗೆ ಬಿದ್ದು ಸಾವಿಗೆ ಶರಣಾಗಿದ್ದಾರೆ.
ಕುರಿಕೋಟಾ ಗ್ರಾಮದವರಾಗಿದ್ದ ಶಿವರಾಜ್, ಹಲವು ವರ್ಷಗಳಿಂದ ಕಲಬುರಗಿ ನಗರದಲ್ಲಿ ವಾಸವಾಗಿದ್ದರು. ಕೆಲ ವರ್ಷಗಳಿಂದ ನೌಕರಿಗಾಗಿ ಅಲೆದಾಡುತ್ತಿದ್ದರು. ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು. ಮಾರ್ಚ್ 2ರಂದು ಬೆಳಿಗ್ಗೆ ಕೆಲಸಕ್ಕೆಂದು ಹೊರ ಹೋದವರು ವಾಪಾಸ್ ಮನೆಗೆ ಬಂದಿರಲಿಲ್ಲ. ಕಂಗಾಲಾದ ಕುಟುಂಬದವರು ಕಲಬುರಗಿ ಸಬರ್ಬನ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ ಪೊಲಿಸರಿಗೆ ಬೆಣ್ಣೆತೊರಾ ಹಿನ್ನೀರಿನಲ್ಲಿ ಶಿವರಾಜ್ ಶವ ಪತ್ತೆಯಾಗಿದೆ. ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.